ನವದೆಹಲಿ: ಯುಎಸ್ಎ ಹಾಗೂ ವೆಸ್ಟ್ಇಂಡೀಸ್ ಅಥಿತ್ಯದಲ್ಲಿ ನಡೆಯುತ್ತಿರುವ 09ನೇ ಆವೃತ್ತಿಯ ಟಿ-20 ವಿಶ್ವಕಪ್ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಈ ಬಾರಿಯ ಟೂರ್ನಿ ವಿಶೇಷತೆಗಳ ಬದಲಾಗಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಹಾಲಿ ರನ್ನರ್ಅಪ್ ಪಾಕಿಸ್ತಾನ ತಂಡವು ತನ್ನ ಕಳಪೆ ಪ್ರದರ್ಶನದಿಂದಾಗಿ ಗ್ರೂಪ್ ಸ್ಟೇಜ್ನಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದು, ಸೂಪರ್ 08ಹಂತಕ್ಕೇರುವಲ್ಲಿ ವಿಫಲವಾಗಿದೆ. ಇತ್ತ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕಾಗಿ ಐಸಿಸಿ ಹಾಗೂ ಬಿಸಿಸಿಐ ಬಗ್ಗೆ ಕಿಡಿಕಾರಿದ್ದು, ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೂ ವಿವಾದಗಳಿಗೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುವ ಪಾಕಿಸ್ತಾನ ಈ ಬಾರಿಯ ಟಿ-20 ವಿಶ್ವಕಪ್ನ ಸೂಪರ್ 8 ಹಂತಕ್ಕೆ ಲಗ್ಗೆ ಇಡುವಲ್ಲಿ ವಿಫಲವಾಗಿದೆ. ಕಳಪೆ ಪ್ರದರ್ಶನದ ಪಳವಾಗಿ ಈ ಬಾರಿ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದ್ದು, ಆಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಇದರ ನಡುವೆಯೆ ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳು ಮೈದಾನ ನಿರ್ವಹಣೆ ಕುರಿತಾಗಿ ಐಸಿಸಿ ಹಾಗೂ ಬಿಸಿಸಿಐಅನ್ನು ದೂರಿದ್ದಾರೆ.
ಜೂನ್ 15ರಂದು ಫ್ಲೋರಿಡಾದಲ್ಲಿ ಭಾರತ ಹಾಗೂ ಕೆನೆಡಾ ನಡುವಿನ ಪಂದ್ಯ ನಡೆಯಬೇಕಿತ್ತು. ಭಾರೀ ಮಳೆಯಿಂದಾಗಿ ಮೈದಾನವು ತುಂಬಾ ತೇವವಾಗಿತ್ತು, ಇದರಿಂದಾಗಿ ಟಾಸ್ ಕೂಡ ವಿಳಂಬವಾಯಿತು. ಉಭಯ ತಂಡಗಳ ನಡುವೆ ಪಂದ್ಯವನ್ನು ಏರ್ಪಡಿಸಲು ಗ್ರೌಂಡ್ಸ್ಮನ್ಗಳು ಸಾಕಷ್ಟು ಪ್ರಯತ್ನಿಸಿದರು. ಮೈದಾನವನ್ನು ಒಣಗಿಸಲು ಮೂರು ಡ್ರೈಯರ್ ಯಂತ್ರಗಳನ್ನು ನಿಯೋಜಿಸಲಾಗಿತ್ತು. ಆದರೆ ಇದರ ಹೊರತಾಗಿಯೂ ಪಂದ್ಯಕ್ಕೆ ಮೈದಾನ ಸಜ್ಜುಗೊಳ್ಳಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಆದರೆ ಇದೀಗ ಪಾಕಿಸ್ತಾನದ ಈ ವಿಚಾರವಾಗಿ ಖ್ಯಾತೆ ತೆಗೆದಿದ್ದು, ತಮ್ಮ ತಂಡಕ್ಕೆ ಐಸಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಫ್ಲೋರಿಡಾದಲ್ಲಿ ಭಾರಿ ಮಳೆ ಬಂದಿದ್ದರಿಂದ ಭಾರತ ಹಾಗೂ ಕೆನಡಾ ನಡುವಿನ ಪಂದ್ಯವನ್ನು ನಡೆಸುವ ಸುಲವಾಗಿ ಮೈದಾನವನ್ನು ಒಣಗಿಸಲು ಮೂರು ಡ್ರೈಯರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಅದಕ್ಕೂ ಮುನ್ನ ನಡೆಯಬೇಕಿದ್ದ ಐರ್ಲೆಂಡ್ ಹಾಗೂ ಯುಎಸ್ಎ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಸುಮಾರು 3 ಗಂಟೆಗಳ ಕಾಲ ಮಳೆ ನಿಂತಿದ್ದು, ಮೈದಾನವನ್ನು ಒಣಗಿಸುವ ಪ್ರಯತ್ನ ಕೂಡ ನಡೆದಿತ್ತು. ಆದರೆ ಯುಎಸ್ಎ ಹಾಗೂ ಐರ್ಲೆಂಡ್ ನಡುವಿನ ಪಂದ್ಯಕ್ಕೆ ಮೈದಾನವನ್ನು ಒಣಗಿಸಲು ಕೇವಲ 1 ಡ್ರೈಯರ್ ಯಂತ್ರವನ್ನು ಮಾತ್ರ ಬಳಸಲಾಗಿತ್ತು. ಹೀಗಾಗಿ ಈ ತಾರತಮ್ಯವನ್ನು ವಿರೋಧಿಸಿರುವ ಪಾಕಿಸ್ತಾನ ಅಭಿಮಾನಿಗಳು, ಐಸಿಸಿ ತಮ್ಮ ತಂಡದ ವಿರುದ್ಧ ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ.
ಯುಎಸ್ಎ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ಪಾಕಿಸ್ತಾನಕ್ಕೆ ಅತ್ಯವಶ್ಯಕವಾಗಿತ್ತು. ಈ ಪಂದ್ಯದ ಮೇಲೆ ಪಾಕಿಸ್ತಾನದ ಸೂಪರ್ 08 ಭವಿಷ್ಯ ನಿಂತಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ಅಮೆರಿಕವನ್ನು ಸೋಲಿಸಿದ್ದರೆ ಪಾಕಿಸ್ತಾನಕ್ಕೆ ಸೂಪರ್-8ರ ಬಾಗಿಲು ತೆರೆಯುತ್ತಿತ್ತು. ಆದರೆ, ಮಳೆಯಿಂದಾಗಿ ರದ್ದುಗೊಂಡಿತ್ತು. ಇದರೊಂದಿಗೆ ಅಮೆರಿಕ ಒಂದು ಅಂಕ ಪಡೆದು ಸೂಪರ್-8ಗೆ ಅರ್ಹತೆ ಪಡೆಯಿತು. ಈ ವಿಚಾರವನ್ನು ಮುಂದಿಟ್ಟುಕೊಂಡು ಕಿಡಿಕಾರುತ್ತಿರುವ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ವಿರುದ್ಧ ಬಿಸಿಸಿಐ ಹಾಗೂ ಐಸಿಸಿ ಪಿತೂರಿ ನಡೆಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಹಾಲಿ ರನ್ನರ್ಅಪ್ ಆಗಿ ಈ ಬಾರಿಯ ಚುಟುಕು ವಿಶ್ವ ಸಮರವನ್ನು ಆರಂಭಿಸಿದ ಪಾಕಿಸ್ತಾನ ತಂಡವು ಕಳಪೆ ಪ್ರದರ್ಶನ ನೀಡುವ ಮೂಲಕ ಸೂಪರ್-8 ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಮೊದಲ ಎರಡು ಪಂದ್ಯಗಳಲ್ಲೂ ಸೋತ ಪಾಕ್ ಪಡೆ ಇದೀಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಅದರಲ್ಲೂ ಕ್ರಿಕೆಟ್ ಶಿಶು ಅಮೆರಿಕ ಹಾಗೂ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕ್ ತಂಡದ ಸೋಲು ಅದರ ಅಭಿಮಾನಿಗಳಿಗೆ ಆಘಾತ ನೀಡಿದೆ. ಹೀಗಾಗಿ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.