ಕ್ರೀಡೆ

ಮೊದಲ ದಿನವೇ ಗುಜರಾತ್‌ಗೆ ಕಡಿವಾಣ ಹೇರಿದ ಕರ್ನಾಟಕ: ವೇಗಿ ಕೌಶಿಕ್ ಬಿಗಿ ದಾಳಿ

ಅಹಮದಾಬಾದ್: ವೇಗಿ ವಾಸುಕಿ ಕೌಶಿಕ್ (49ಕ್ಕೆ 4) ಬಿಗಿ ದಾಳಿ ಹಾಗೂ ಇತರ ಬೌಲರ್‌ಗಳ ಸಂಘಟಿತ ದಾಳಿ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಆತಿಥೇಯ ಗುಜರಾತ್‌ಗೆ ಕಡಿವಾಣ ಹೇರಿದೆ. ಕ್ಷಿತಿಜ್ ಪಟೇಲ್ (95 ರನ್, 161 ರನ್, 11 ಬೌಂಡರಿ) ಶತಕ ವಂಚಿತ ಬ್ಯಾಟಿಂಗ್ ಗುಜರಾತ್ ತಂಡ ಗೌರವಾಯುತ ಮೊತ್ತ ಪೇರಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣಲ್ಲಿ ಶುಕ್ರವಾರ ಆರಂಭಗೊಂಡ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮಯಾಂಕ್ ಅಗರ್ವಾಲ್ ಫಿಲ್ಡೀಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ದಿನದಂತ್ಯಕ್ಕೆ 88 ಓವರ್‌ಗಳಲ್ಲಿ 264 ರನ್‌ಗಳಿಗೆ ಮೊದಲ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು.

ಗುಜರಾತ್: 88 ಓವರ್‌ಗಳಲ್ಲಿ 264 (ಪ್ರಿಯಾಂಕ್ 24, ಹಿತ್ ಟೇಲ್ 4, ಕ್ಷಿತಿಜ್ ಪಟೇಲ್ 95, ಉಮಾಂಗ್ 72, ಚಿಂತನ್ ಗಜ 45*, ವಿ.ಕೌಶಿಕ್ 49ಕ್ಕೆ4, ವೈಶಾಕ್ ವಿಜಯ್ ಕುಮಾರ್ 42ಕ್ಕೆ2, ಪ್ರಸಿದ್ಧ ಕೃಷ್ಣ 62ಕ್ಕೆ2).

ಕೌಶಿಕ್ ಬಿಗಿ ದಾಳಿ

ಆತಿಥೇಯ ಗುಜರಾತ್‌ಗೆ ವೇಗಿ ವಿ. ಕೌಶಿಕ್ ಮೊದಲ ಶಾಕ್ ನೀಡಿದರು. ತಾನೆಸೆದ ಮೊದಲ ಓವರ್‌ನಲ್ಲಿ ಆರಂಭಿಕ ಹಿತ್ ಪಟೇಲ್ (4) ವಿಕೆಟ್ ಕಬಳಿಸಿದ ಕೌಶಿಕ್, ಮರು ಓವರ್‌ನಲ್ಲಿ ಸನ್‌ಪ್ರೀತ್ ಬಗ್ಗಗೂ ಪೆವಿಲಿಯನ್ ದಾರಿ ತೋರಿದರು. ಆರನೇ ಓವರ್‌ನಲ್ಲಿ ಮನನ್ ಹಿಂಗ್ರಾಜಿಯಾ (4)ವಿಕೆಟ್ ಪಡೆದ ಪ್ರಸಿದ್ಧ ಕೃಷ್ಣ ಗುಜರಾತ್‌ಗೆ ಮತ್ತೊಂದು ಪೆಟ್ಟು ನೀಡಿ ಕರ್ನಾಟಕಕ್ಕೆ ಆರಂಭಿಕ ಮೇಲುಗೈ ತಂದರು. ಆದರೆ ಮತ್ತೋರ್ವ ಆರಂಭಿಕ ಪ್ರಿಯಾಂಕ್ ಪಾಂಚಾಲ್ (24) ಜತೆಯಾದ ಕ್ಷಿತಿಜ್ ಪಟೇಲ್ ತಂಡಕ್ಕೆ ಚೇತರಿಕೆ ನೀಡಿದರು.

ಶತಕವಂಚಿತ ಕ್ಷಿತಿಜ್

ಪ್ರಿಯಾಂಕ್ ನಿರ್ಗಮನ ಬಳಿಕ 45 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಗುಜರಾತ್ ಅಲ್ಪ ಮೊತ್ತಕ್ಕೆ ಕುಸಿಯು ಭೀತಿ ಎದುರಿಸಿತು. ಆದರೆ, ಬಳಿಕ ಕ್ಷಿತಿಜ್ ಪಟೇಲ್ ಹಾಗೂ ಉಮಾಂಗ್ (72 ರನ್, 143 ಎಸೆತ, 12 ಬೌಂಡರಿ) ಜೋಡಿ ಕರ್ನಾಟಕಕ್ಕೆ ಸವಾಲೆನಿಸಿತು. ಭೋಜನ ವಿರಾಮದ ಬಳಿಕ ಕರ್ನಾಟಕ ಬೌಲರ್‌ಳಿಗೆ ಕಾಟ ನೀಡಿದ ಇವರಿಬ್ಬರು 5 ವಿಕೆಟ್‌ಗೆ 157 ರನ್ ಕಲೆಹಾಕಿದರು. ವೈಶಾಕ್ ವಿಜಯ್ ಕುಮಾರ್ ಈ ಜತೆಯಾಟಕ್ಕೆ ಬ್ರೇಕ್ ಹಾಕಿದರು. ಇದರೊಂದಿಗೆ ಕ್ಷಿತಿಜ್ ಚೊಚ್ಚಲ ಶತಕದಿಂದ ವಂಚಿತರಾದರು. ಇದರ ಬೆನ್ನಲ್ಲೇ ಉಮಾಂಗ್, ರಿಪಲ್ ಪಟೇಲ್ (2) ವಿಕೆಟ್ ಕಬಳಿಸಿದ ಯುವ ಸ್ಪಿನ್ನರ್ ರೋಹಿತ್ ಕುಮಾರ್ ಗುಜರಾತ್‌ಗೆ ನಿಯಂತ್ರಣ ಹೇರಿದರು. ನಾಯಕ ಚಿಂತನ್ ಗಜ (45*) ಕೆಳ ಕ್ರಮಾಂಕದಲ್ಲಿ ತುಸು ಪ್ರತಿರೋಧ ತೋರಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಕೌಶಿಕ್ ಮತ್ತೆರೆಡು ವಿಕೆಟ್ ಪಡೆದು, ಹಿಂದಿನ ಆವೃತ್ತಿಯ ಉತ್ತಮ ಲಯವನ್ನು ಮುಂದುವರಿಸಿದರು.