ಜೈಪುರ: ಸ್ಲಾಗ್ ಓವರ್‌ಗಳಲ್ಲಿ ವೇಗಿ ಆವೇಶ್ ಖಾನ್ (37ಕ್ಕೆ 3) ನಡೆಸಿದ ಕರಾರುವಾಕ್ ಬೌಲಿಂಗ್ ದಾಳಿಯ ನೆರವಿನಿಂದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು 2 ರನ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ಸತತ 4ನೇ ಸೋಲು ಕಂಡ ರಾಜಸ್ಥಾನ ರಾಯಲ್ಸ್ 8ನೇ ಸ್ಥಾನದಲ್ಲೇ ಉಳಿಯಿತು.
ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಲಖನೌ 54 ರನ್‌ಗಳಿಗೆ ಅಗ್ರ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಗೂಡಿದ ಮಾರ್ಕ್ರಮ್ ಹಾಗೂ ಬಡೋನಿ ಸಮಯೋಚಿತ ಆಟದ ಬಲದಿಂದ 5 ವಿಕೆಟ್‌ಗೆ 180 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (74 ರನ್, 52 ಎಸೆತ, 5 ಬೌಂಡರಿ, 4 ಸಿಕ್ಸರ್) ಜೈಸ್ವಾಲ್ ಹಾಗೂ 14 ವರ್ಷದ ವೈಭವ್ ಒದಗಿಸಿದ ಭರ್ಜರಿ ಆರಂಭದ ನಡುವೆಯೂ ರಾಜಸ್ಥಾನ ತಂಡ 5 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಸತತ 2ನೇ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ 9 ರನ್‌ಗಳಿಸಲಾಗದೆ ಗೆಲುವಿನ ಸನಿಹದಲ್ಲಿ ಮುಗ್ಗರಿಸಿತು.
ಜೈಸ್ವಾಲ್ ಆಟ ವ್ಯರ್ಥ
ಸವಾಲಿನ ಮೊತ್ತದ ಚೇಸಿಂಗ್‌ಗೆ ಇಳಿದ ರಾಜಸ್ಥಾನಕ್ಕೆ ಜೈಸ್ವಾಲ್ ಹಾಗೂ ವೈಭವ್ ಹಾಲಿ ಸೀಸನ್‌ನಲ್ಲಿ ಕನಸಿನ ಆರಂಭ ಒದಗಿಸಿದರು. ಜೈಸ್ವಾಲ್ ಬಿರುಸಿನಾಟಕ್ಕೆ ಸಮರ್ಥ ಬೆಂಬಲ ಒದಗಿಸಿದ ವೈಭವ್ ಸಿಕ್ಕ ಅವಕಾಶವನ್ನು . ಜೈಸ್ವಾಲ್-ವೈಭವ್ ಜೋಡಿ ಮೊದಲ ವಿಕೆಟ್‌ಗೆ 52 ಎಸೆತಗಳಲ್ಲಿ 85 ರನ್‌ಗಳಿಸಿ ಪಂದ್ಯದ ಗತಿ ಬದಲಾಯಿಸಿದರು. ಜೈಸ್ವಾಲ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ವೈಭವ್ ನಿರ್ಗಮನದ ಬಳಿಕ ನಿತೀಶ್ ರಾಣಾ (8) ನಿರಾಸೆ ಮೂಡಿಸಿದರು. ಅರ್ಧಶತಕ ಬಳಿಕ ಮತ್ತಷ್ಟು ಬಿರುಸಿನಾಟಕ್ಕಿಳಿದ ಜೈಸ್ವಾಲ್ ಚೇಸಿಂಗ್ ಸುಲಭಗೊಳಿಸಿದರು. ಜೈಸ್ವಾಲ್- ರಿಯಾನ್ ಪರಾಗ್ (39) ಮೂರನೇ ವಿಕೆಟ್‌ಗೆ 43 ಎಸೆತಗಳಲ್ಲಿ 62 ರನ್ ಸೇರಿಸಿ ಬಲ ತುಂಬಿದರು. 18ನೇ ಓವರ್‌ನಲ್ಲಿ ಇವರಿಬ್ಬರ ವಿಕೆಟ್ ಪಡೆದ ಆವೇಶ್ ಪಂದ್ಯ ತಿರುಗಿಸಿದರು. ಆವೇಶ್ ಖಾನ್ ಎಸೆದ ಅಂತಿಮ ಓವರ್‌ನಲ್ಲಿ 9 ರನ್ ಬೇಕಿದ್ದಾಗ (1,2,ವಿಕೆಟ್,0, 2,1) 3ನೇ ಎಸೆತದಲ್ಲಿ ಶಿಮ್ರೊನ್ ಹೆಟ್ಮೆಯರ್ (12) ಔಟಾದರು. ನಂತರ ಶುಭಂ ದುಬೆ (3*) ಹಾಗೂ ಧ್ರುವ ಜುರೆಲ್ (6*) ದಡ ಸೇರಿಸುವಲ್ಲಿ ಎಡವಿದರು.