ವೆಲ್ಲಿಂಗ್ಟನ್: ಯುವ ವೇಗದ ಬೌಲಿಂಗ್ ವಿಭಾಗದ ಅಮೋ ನಿರ್ವಹಣೆಯ ಬಲದಿಂದ ಏಕದಿನ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಗೆಲುವಿನ ಓಟ ಮುಂದುವರಿಸಲು ಸಜ್ಜಾಗಿದೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯ ಶನಿವಾರ ನಡೆಯಲಿದ್ದು, ಶುಭಮಾನ್ ಗಿಲ್ ಪಡೆ 5 ಪಂದ್ಯಗಳ ಸರಣಿಯಲ್ಲಿ ತನ್ನ ಮುನ್ನಡೆಯನ್ನು 2-0ಗೆ ವಿಸ್ತರಿಸುವ ತವಕದಲ್ಲಿದೆ. ಆದರೆ ಪಂದ್ಯಕ್ಕೆ ಮಳೆ ಅಡಚಣೆ ತವರು ಭೀತಿ ಹೆಚ್ಚಾಗಿದೆ.
ಮುಂದಿನ ವರ್ಷದ ಏಕದಿನ ವಿಶ್ವಕಪ್ ಸಿದ್ಧತೆಗೆ ವೇದಿಕೆಯಾಗಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅತ್ಯಂತ ಸಮತೋಲನದ ತಂಡವನ್ನೇ ಕಣಕ್ಕಿಳಿಸಿದಂತಿತ್ತು. ಬೌಲಿಂಗ್ ವಿಭಾಗ ಅನನುಭವಿಗಳಿಂದ ಕೂಡಿದ್ದರೂ, ಅಂಶುಲ್ ಕಂಬೋಜ್, ಗುರುನೂರ್ ಬ್ರಾರ್ ಮತ್ತು ಟಿ20 ಅನುಭವಿ ಅರ್ಷದೀಪ್ ಸಿಂಗ್ ಕಿವೀಸ್ಗೆ ಕಡಿವಾಣ ಹೇರಿ ಭಾರತ ಶುಭಾರಂಭ ಕಾಣಲು ನೆರವಾಗಿದ್ದರು. ಹೆನ್ರಿ ಸ್ಟೇಡಿಯಂನಲ್ಲಿ ಕಿರಿದಾಗಿರುವ ಸ್ಕ್ವೇರ್ ಬೌಂಡರಿಗಳು ಈ ಬೌಲರ್ಗಳಿಗೆ ಇನ್ನಷ್ಟು ಸವಾಲೊಡ್ಡಲಿವೆ.
ಮೊದಲ ಪಂದ್ಯದಲ್ಲಿ ಭಾರತ ಮಳೆ ಅಡಚಣೆಯ ನಡುವೆ ಸುಲಭವಾಗಿಯೇ ಚೇಸಿಂಗ್ ಮಾಡಿತ್ತು. ಇದಕ್ಕೆ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಅಸಾಧಾರಣ ನಿರ್ವಹಣೆಯೂ ಪ್ರಮುಖ ಕಾರಣವಾಗಿತ್ತು. ಯಾಕೆಂದರೆ ತಂಡದ ಇತರ ಬ್ಯಾಟರ್ಗಳ ನಿರ್ವಹಣೆ ತೃಪ್ತಿದಾಯಕವಾಗಿರಲಿಲ್ಲ. ರೋಹಿತ್ ಶರ್ಮ ಖಾತೆ ತೆರೆಯದೆ ಔಟಾಗಿದ್ದರೆ, ಶ್ರೇಯಸ್ ಅಯ್ಯರ್ ಪುಟಿದೇಳುವ ಎಸೆತದ ಎದುರು ಮತ್ತೊಮ್ಮೆ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿದ್ದರು. 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಅಕ್ಷರ್ ಪಟೇಲ್ ಕೂಡ ಪಿಚ್ಗೆ ಹೊಂದಿಕೊಳ್ಳಲು ಕಷ್ಟಪಟ್ಟರು. ಹೀಗಾಗಿ ಸರಣಿಯ ಮುಂದಿನ ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕ ಇನ್ನಷ್ಟು ಸುಧಾರಿತ ನಿರ್ವಹಣೆ ತೋರಿಸಬೇಕಾಗಿದೆ.
ಸಿರಾಜ್ ಕಣಕ್ಕಿಳಿಯುವ ನಿರೀಕ್ಷೆ
ಭಾರತ ಎ ತಂಡದಿಂದ ಭಾರತ ಏಕದಿನ ತಂಡವನ್ನು ಕೂಡಿಕೊಳ್ಳುವುದು ತಡವಾಗಿದ್ದರಿಂದ ಅನುಭವಿ ವೇಗಿ ಮೊಹಮದ್ ಸಿರಾಜ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ 2ನೇ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಇದರಿಂದ ವೇಗದ ಬೌಲಿಂಗ್ ವಿಭಾಗ ಹೆಚ್ಚಿನ ಬಲವನ್ನು ಪಡೆದುಕೊಳ್ಳಲಿದೆ.
ಟೀಮ್ ನ್ಯೂಸ್:
ಭಾರತ: ಚತುರ್ದಿನ ಪಂದ್ಯ ಆಡಿದ ಬಳಿಕ ಮೊಹಮದ್ ಸಿರಾಜ್ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಇದರಿಂದ ಭಾರತದ ಗೆಲುವಿನ ಕಾಂಬಿನೇಷನ್ ಬದಲಾಗುವ ನಿರೀಕ್ಷೆ ಇದೆ. ಸಿರಾಜ್ಗೆ ಅಕಿಬ್ ನಬಿ ಸ್ಥಾನ ಬಿಟ್ಟುಕೊಡಬಹುದು.
ನ್ಯೂಜಿಲೆಂಡ್: ಆತಿಥೇಯ ತಂಡದಲ್ಲೂ ಏಕೈಕ ಬದಲಾವಣೆ ನಿರೀಸಲಾಗಿದೆ. ಮ್ಯಾಟ್ ಹೆನ್ರಿ ಆಡಲು ಫಿಟ್ ಆಗಿದ್ದು, ಅವರಿಗೆ ಜೇಕಬ್ ಡಫಿ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ಡೆವೊನ್ ಕಾನ್ವೇ ಸರಣಿಯಿಂದಲೇ ಹೊರಬಿದ್ದಿರುವುದರಿಂದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ.
*ಆರಂಭ: ಬೆಳಗ್ಗೆ 7.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಮಳೆ ಅಡಚಣೆ ಭೀತಿ
ಆಕ್ಲೆಂಡ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಡಿದ ನಡುವೆಯೂ ಸ್ಪಷ್ಟ ಫಲಿತಾಂಶ ಹೊರಹೊಮ್ಮಿತ್ತು. ಇದೀಗ ವೆಲ್ಲಿಂಗ್ಟನ್ನಲ್ಲಿ ನಿಗದಿಯಾಗಿರುವ 2ನೇ ಪಂದ್ಯಕ್ಕೂ ಮಳೆ ಅಡಚಣೆ ತರುವ ಭೀತಿ ಎದುರಾಗಿದೆ. ಶುಕ್ರವಾರ ಉಭಯ ತಂಡಗಳ ಅಭ್ಯಾಸಕ್ಕೂ ಮಳೆ ಅಡ್ಡಿಪಡಿಸಿದೆ. ಇದರಿಂದ ಭಾರತ ತಂಡ ತನ್ನ ಅಭ್ಯಾಸವನ್ನೇ ರದ್ದುಪಡಿಸಿದರೆ, ನ್ಯೂಜಿಲೆಂಡ್ ಒಳಾಂಗಣದಲ್ಲಿ ಅಭ್ಯಾಸ ನಡೆಸಿದೆ. ಶನಿವಾರ ಇಲ್ಲಿ ಮಳೆಯಾಗುವ ಸಾಧ್ಯತೆ ಶೇ.60ರಷ್ಟಿದೆ.
ಕಾನ್ವೇ ಔಟ್, ಕೆಲ್ಲಿ ಇನ್
ಅಭ್ಯಾಸದ ವೇಳೆ ಆದ ಕನ್ಕಷನ್ನಿಂದಾಗಿ ನ್ಯೂಜಿಲೆಂಡ್ ಎಡಗೈ ಆರಂಭಿಕ ಡೆವೊನ್ ಕಾನ್ವೇ ಭಾರತ ವಿರುದ್ಧದ ಏಕದಿನ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಸರಣಿಯ ಉಳಿದ ಪಂದ್ಯಗಳಿಗೆ ಅವರ ಬದಲಿಗೆ ಎಡಗೈ ಬ್ಯಾಟರ್ ನಿಕ್ ಕೆಲ್ಲಿ ಸ್ಥಾನ ಪಡೆದಿದ್ದಾರೆ. ಕೆಲ್ಲಿ ಈ ಮುನ್ನ ಸರಣಿಯ ಕೊನೇ 2 ಪಂದ್ಯಗಳಿಗಷ್ಟೇ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಭ್ಯಾಸದ ವೇಳೆ ಕಾನ್ವೇಗೆ ಢಿಕ್ಕಿಯಾಗಿದ್ದ ವೇಗಿ ಮ್ಯಾಟ್ ಹೆನ್ರಿ 2ನೇ ಏಕದಿನ ಪಂದ್ಯಕ್ಕೆ ಫಿಟ್ ಆಗಿದ್ದಾರೆ.
ಪಿಚ್ ರಿಪೋರ್ಟ್
ವೆಲ್ಲಿಂಗ್ಟನ್ನ ಹೆನ್ರಿ ಸ್ಟೇಡಿಯಂನಲ್ಲಿ ಕಳೆದ ತಿಂಗಳು ನಡೆದ ಉಭಯ ತಂಡಗಳ ಟಿ20 ಪಂದ್ಯದಲ್ಲಿ ಭಾರತ ತಂಡ ಕಿವೀಸ್ನ 198 ರನ್ ಸವಾಲನ್ನು 13.2 ಓವರ್ಗಳಲ್ಲೇ ಬೆನ್ನಟ್ಟಿ ಗೆದ್ದಿತ್ತು. ಆದರೆ ಏಕದಿನದಲ್ಲೂ ಅದೇ ರೀತಿಯ ರನ್ಪ್ರವಾಹದ ನಿರೀಕ್ಷೆ ಇಲ್ಲ. ಮೋಡ ಕವಿದ ವಾತಾವರಣದಿಂದಾಗಿ ವೇಗದ ಬೌಲರ್ಗಳಿಗೆ ಪಿಚ್ ಹೆಚ್ಚು ನೆರವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇಲ್ಲಿ ನಡೆದಿದ್ದ ಕೊನೇ ಏಕದಿನದಲ್ಲಿ ಇಂಗ್ಲೆಂಡ್ 44 ರನ್ ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡು ಪರದಾಡಿತ್ತು. ಭಾರತೀಯ ವೇಗಿಗಳು ಮತ್ತೊಮ್ಮೆ ಎಕ್ಸ್ಟ್ರಾ ಬೌನ್ಸ್ನಿಂದ ಲಾಭ ಪಡೆದುಕೊಳ್ಳಬಹುದಾಗಿದೆ.