ಅಬುಧಾಬಿ: ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಸತತ ಮೂರು ಸೋಲಿಗೆ ಕಾರಣ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೋಶ್ ಬಟ್ಲರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಪವರ್ ಪ್ಲೇ ಹಂತದಲ್ಲೇ ವಿಕೆಟ್ ಕೈಚೆಲ್ಲಿದರೆ ರನ್‌ಗಳಿಸುವುದು ಸುಲಭವಲ್ಲ ಎಂದು ಮುಂಬೈ ಇಂಡಿಯನ್ಸ್ ಎದುರು 57 ರನ್‌ಗಳಿಂದ ಸೋಲನುಭವಿಸಿದ ಬಳಿಕ ಬಟ್ಲರ್ ಹೇಳಿಕೊಂಡರು. ಇದರೊಂದಿಗೆ ರಾಜಸ್ಥಾನ ತಂಡ ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲಿಗೆ ಶರಣಾಯಿತು. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕಳಪೆ ನಿರ್ವಹಣೆಯೇ ಎಂದು ಬಟ್ಲರ್ ಪರೋಕ್ಷವಾಗಿ ಕಟುಕಿದರು.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನೀಡಿದ 194 ರನ್ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ, ಜೋಶ್ ಬಟ್ಲರ್ (70ರನ್, 44 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೊರಾಟದ ನಡುವೆಯೂ 18.1 ಓವರ್‌ಗಳಲ್ಲಿ 136 ರನ್‌ಗಳಿಗೆ ಸರ್ವಪತನ ಕಂಡಿತು.
ಪವರ್ ಪ್ಲೇನಲ್ಲಿ ರನ್ ಗಳಿಸುವ ಅವಕಾಶವನ್ನು ಸೂಕ್ತವಾಗಿ ಬಳಿಸಿಕೊಳ್ಳಬೇಕು. ಆದರೆ, ತಂಡ ಈ ಹಂತದಲ್ಲೇ ಎಡವುತ್ತಿದೆ ಎಂದರು. ಆರಂಭಿಕ ಮೂರು ಓವರ್‌ಗಳಲ್ಲೇ ರಾಯಲ್ಸ್ ತಂಡ 12 ರನ್‌ಗಳಿಗೆ 3 ವಿಕೆಟ್ ಕೈಚೆಲ್ಲಿತು.
ಮುಂಬೈ ತಂಡದ ಬೌಲಿಂಗ್ ನಿರ್ವಹಣೆಯನ್ನು ಶ್ಲಾಸಿದ ಬಟ್ಲರ್, ಕೇವಲ 47 ಎಸೆತಗಳಲ್ಲಿ 79 ರನ್ ಸಿಡಿಸಿದ ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೂರ್ಯಕುಮಾರ್ ಯಾದವ್ ಅದ್ಭುತವಾದ ಇನಿಂಗ್ಸ್ ಕಟ್ಟಿದರು. ಉತ್ತಮ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಮೈದಾನದಲ್ಲಿ ತಂಡದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾದೆವು ಎಂದು ಬಟ್ಲರ್ ಹೇಳಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನನಗೆ ವಿಶ್ವಾಸ ಮೂಡಿದೆ. ಈ ಹೊತ್ತಲ್ಲಿ ಹೆಚ್ಚು ಕ್ರೀಸ್‌ನಲ್ಲಿ ಇರಲು ಬಯಸಿದೆ ಎಂದಿದ್ದಾರೆ. ಐಪಿಎಲ್‌ಗೆ ಪದಾರ್ಪಣೆ ಮಾಡಿದ ಯುವ ಬೌಲರ್ ಕಾರ್ತಿಕ್ ತ್ಯಾಗಿ ಸಿಕ್ಕ ಮೊದಲ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡರು ಎಂದರು.
* 3: ಸಂಜು ಸ್ಯಾಮ್ಸನ್, ಇದುವರೆಗೂ ಆಡಿರುವ 5 ಪಂದ್ಯಗಳ ಪೈಕಿ 3 ಬಾರಿ ಕನಿಷ್ಠ ಎರಡಂಕಿ ಮೊತ್ತ ತಲುಪಲು ವಿಫಲರಾಗಿದ್ದಾರೆ. 2007ರಲ್ಲಿ 5 ಬಾರಿ, 2018ರಲ್ಲಿ 4 ಬಾರಿ ಹಾಗೂ 2019ರಲ್ಲಿ 4 ಬಾರಿ ಕನಿಷ್ಠ ಎರಡಂಕಿ ತಲುಪಿರಲಿಲ್ಲ.