ಮೆಲ್ಬೋರ್ನ್: ಸತತ 2ನೇ ಗ್ರಾಂಡ್ ಸ್ಲಾಂ ಗೆಲ್ಲುವ ಹಂಬಲದಲ್ಲಿರುವ ಅಮೆರಿಕದ 19 ವರ್ಷದ ಆಟಗಾರ್ತಿ ಕೋಕೋ ಗೌಫ್, 3ನೇ ಶ್ರೇಯಾಂಕಿತ ರಷ್ಯಾದ ತಾರೆ ಡೇನಿಯಲ್ ಮೆಡ್ವೆಡೇವ್, ಹಾಲಿ ರನ್ನರ್ಅಪ್ ಗ್ರೀಸ್ನ ಸ್ಟೆಫಾನೋಸ್ ಸಿಸಿಪಾಸ್ ಆಸ್ಟ್ರೆಲಿಯನ್ ಓಪನ್ನಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ. ತಾಯ್ತನದ ಬಿಡುವಿನ ಬಳಿಕ ಮರಳಿದ ಜಪಾನ್ ತಾರೆ ನವೊಮಿ ಒಸಾಕಾ, ವಿಂಬಲ್ಡನ್ ಚಾಂಪಿಯನ್ ಮರ್ಕೆಟಾ ವೊಂಡ್ರೊಸೋವಾ ಮತ್ತು ಐದು ಬಾರಿಯ ಫೈನಲಿಸ್ಟ್ ಆಂಡಿ ಮರ್ರೆ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಅನುಭವಿಸಿದ್ದಾರೆ.
4ನೇ ಶ್ರೇಯಾಂಕಿತೆ ಕೋಕೋ ಗೌಫ್ ಮೊದಲ ಸುತ್ತಿನಲ್ಲಿ ಸ್ಲೊವೇನಿಯಾದ ಆನ್ನಾ ಕ್ಯಾರೊಲಿನಾ ಸ್ಕಿಮಿಡ್ಲೋವಾ ವಿರುದ್ಧ 6-3, 6-0 ನೇರಸೆಟ್ಗಳಿಂದ ಭರ್ತಿ ಒಂದು ಗಂಟೆಯ ಹೋರಾಟದಲ್ಲಿ ಗೆದ್ದರು. 7ನೇ ಶ್ರೇಯಾಂಕಿತೆ ಜೆಕ್ ಗಣರಾಜ್ಯದ ಮರ್ಕೆಟಾ ವೊಂಡ್ರೊಸೋವಾ 1-6, 2-6ರಿಂದ ಡಯಾನ ಯಸ್ಟ್ರೆಮ್ಸ್ಕಾ ವಿರುದ್ಧ ಆಘಾತ ಎದುರಿಸಿದರು. 6ನೇ ಶ್ರೇಯಾಂಕಿತೆ ಓನ್ಸ್ ಜಬೇರ್ 6-3, 6-1 ನೇರಸೆಟ್ಗಳಿಂದ ಯೂಕ್ರೇನ್ನ ಯುಲಿಯಾ ಸ್ಟಾರೊಡುಬ್ಸೇವಾ ವಿರುದ್ಧ ಸುಲಭ ಜಯ ಸಾಧಿಸಿ ಶುಭಾರಂಭ ಕಂಡರು.
2021 ಮತ್ತು 2022ರ ಫೈನಲಿಸ್ಟ್ ಮೆಡ್ವೆಡೇವ್ ಪುರುಷರ ಸಿಂಗಲ್ಸ್ನಲ್ಲಿ ಸುಲಭ ಮುನ್ನಡೆ ಕಂಡರು. ಮೆಡ್ವೆಡೇವ್ 7-5, 6-2, 6-4, 1&0ಯಿಂದ ಮುಂದಿದ್ದಾಗ ಎದುರಾಳಿ ಫ್ರಾನ್ಸ್ನ ಟೆರೆನ್ಸ್ ಆಟ್ಮನ್ ಗಾಯದಿಂದಾಗಿ ನಿವೃತ್ತಿ ಹೊಂದಿದರು. ಅರ್ಹತಾ ಸುತ್ತಿನಿಂದ ಮೇಲೇರಿದ್ದ 22 ವರ್ಷದ ಆಟ್ಮನ್ ಮೆಲ್ಬೋರ್ನ್ ಬಿಸಿಲಿನ ತಾಪದ ನಡುವೆ ಸ್ನಾಯುಸೆಳೆತದಿಂದ ಬಳಲಿದರು. 7ನೇ ಶ್ರೇಯಾಂಕಿತ ಸಿಸಿಪಾಸ್ 5-7, 6-1, 6-1, 6-3ರಿಂದ ಬೆಲ್ಜಿಯಂನ ಜಿಜೌ ಬೆರ್ಗ್ಸ್ ವಿರುದ್ಧ 2 ಗಂಟೆ, 59 ನಿಮಿಷಗಳ ಕಾದಾಟದಲ್ಲಿ ಗೆಲುವು ಸಾಧಿಸಿದರು.
ಒಸಾಕಾಗೆ ಶಾಕ್
ಒಂದು ವರ್ಷದ ತಾಯ್ತನದ ಬಿಡುವಿನ ಬಳಿಕ ಮರಳಿ ಕಣಕ್ಕಿಳಿದ 26 ವರ್ಷದ ಒಸಾಕಾ, ಫ್ರಾನ್ಸ್ ತಾರೆ ಕ್ಯಾರೊಲಿನ್ ಗಾರ್ಸಿಯಾ ಎದುರು 4-6, 6-7ರಿಂದ ಪರಾಭವಗೊಂಡರು. 4 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಒಸಾಕಾ, 2022ರ ಯುಎಸ್ ಓಪನ್ ಬಳಿಕ ಯಾವುದೇ ಗ್ರಾಂಡ್ ಸ್ಲಾಂ ಆಡಿರಲಿಲ್ಲ ಮತ್ತು 6 ತಿಂಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮನಿಡಿದ್ದರು. ಮಾಜಿ ವಿಶ್ವ ನಂ. 1 ಒಸಾಕಾ ಸದ್ಯ ವಿಶ್ವ ರ್ಯಾಂಕಿಂಗ್ನಲ್ಲಿ 833ನೇ ಸ್ಥಾನಕ್ಕೆ ಕುಸಿದಿದ್ದು, ಅದಕ್ಕೆ ತಕ್ಕಂತೆ ಅವರ ಆಟದಲ್ಲೂ ಹಿಂದಿನ ಲಯ ಕಾಣಿಸಲಿಲ್ಲ.
ಮರ್ರೆ ಮೊದಲ ಸುತ್ತಿನಲ್ಲೇ ಮನೆಗೆ!
ಬ್ರಿಟನ್ ತಾರೆ ಆಂಡಿ ಮರ್ರೆ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. 36 ವರ್ಷದ ಮರ್ರೆ ಅರ್ಜೆಂಟೀನಾದ ಥಾಮಸ್ ಮಾರ್ಟಿನ್ ಎಚೆವೆರ್ರಿ ವಿರುದ್ಧ 4-6, 2-6, 2-6 ನೇರಸೆಟ್ಗಳಿಂದ ಪರಾಭವಗೊಂಡರು. ಇದರಿಂದ 3ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ರನ್ನು ಎದುರಿಸುವ ಅವಕಾಶವನ್ನೂ ಮರ್ರೆ ತಪ್ಪಿಸಿಕೊಂಡರು. 3 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಮರ್ರೆ ಮೆಲ್ಬೋರ್ನ್ನಲ್ಲಿ 5 ಬಾರಿ (2010, 11, 13, 15, 16) ಫೈನಲ್ಗೇರಿದ್ದರೂ, ಒಮ್ಮೆಯೂ ಪ್ರಶಸ್ತಿ ಎತ್ತಿಲ್ಲ.