IPL 2025 : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಿಂಚಿನ ದಾಳಿಯನ್ನು ನಡೆಸಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಜಂಟಿಯಾಗಿ ಈ ದಾಳಿಗಳನ್ನು ನಡೆಸಿದ್ದು, ಕ್ಷಿಪಣಿಗಳ ಮೂಲಕ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಈ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಉತ್ತರ ಭಾರತದ ಹಲವಾರು ವಿಮಾನ ನಿಲ್ದಾಣಗಳನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್ ವಿಮಾನ ನಿಲ್ದಾಣಗಳನ್ನು ತುರ್ತು ವಿಷಯವಾಗಿ ಮುಚ್ಚಲಾಗಿದೆ. ಮುಂದಿನ ಆದೇಶದವರೆಗೆ ವಿಮಾನ ನಿಲ್ದಾಣಗಳನ್ನು ತೆರೆಯಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರದ ನಿರ್ಧಾರವು ಆಯಾ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.
ಧರ್ಮಶಾಲಾ ವಿಮಾನ ನಿಲ್ದಾಣ ಮುಚ್ಚುವುದರಿಂದ ಕೆಲವು ಐಪಿಎಲ್ ತಂಡಗಳ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ. ಧರ್ಮಶಾಲಾವು ಮೇ 8 ರಂದು ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಆಯೋಜಿಸಿದರೆ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಮೇ 11 ರಂದು ಆಯೋಜಿಸಲಾಗುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈಗಾಗಲೇ ಧರ್ಮಶಾಲಾ ತಲುಪಿವೆ. ಸರ್ಕಾರದಿಂದ ಯಾವುದೇ ಆದೇಶ ಬರದ ಹೊರತು ಗುರುವಾರ ನಡೆಯಲಿರುವ ಪಂಜಾಬ್-ದೆಹಲಿ ಪಂದ್ಯ ನಿಗದಿಯಂತೆ ನಡೆಯಲಿದೆ ಎಂದು ಹೇಳಲಾಗಿದೆ. ಧರ್ಮಶಾಲಾ ಜೊತೆಗೆ ಹತ್ತಿರದ ಅಮೃತಸರ ಮತ್ತು ಚಂಡೀಗಢ ವಿಮಾನ ನಿಲ್ದಾಣಗಳನ್ನು ಮುಚ್ಚಿರುವುದರಿಂದ, ಬಿಸಿಸಿಐ ತಂಡಗಳ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆಗಳತ್ತ ಗಮನಹರಿಸುತ್ತಿದೆ.
ನಾವು ಸದ್ಯಕ್ಕೆ ಕಾದು ನೋಡಬೇಕಿದೆ. ನಮಗೆ ಬೇರೆ ದಾರಿಯಿಲ್ಲ. ಏಕೆಂದರೆ ಚಂಡೀಗಢ ವಿಮಾನ ನಿಲ್ದಾಣವೂ ಮುಚ್ಚಲ್ಪಟ್ಟಿದೆ. ಆದ್ದರಿಂದ ನಾವು ಏನು ಮಾಡಬೇಕೆಂದು ನೋಡಬೇಕು. ಎರಡೂ ತಂಡಗಳು ಈಗಾಗಲೇ ಇಲ್ಲಿವೆ. ಮೇ 11 ರಂದು ನಡೆಯುವ ಪಂದ್ಯಕ್ಕಾಗಿ ಈ ವಾರದ ಅಂತ್ಯದ ವೇಳೆಗೆ ಮುಂಬೈ ತಲುಪಬೇಕಿದೆ. ದೆಹಲಿ ವಿಮಾನ ನಿಲ್ದಾಣ ಮಾತ್ರ ನಮಗೆ ಹತ್ತಿರದಲ್ಲಿದೆ. ಆದರೆ, ಎರಡೂ ತಂಡಗಳು ರಸ್ತೆ ಮೂಲಕ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸರ್ಕಾರದ ನಿರ್ಧಾರದ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಂಗಳವಾರ, ವಾಂಖೆಡೆ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮುಂಬೈ ಸೋತಿತ್ತು. ಪ್ರಸ್ತುತ, ಮುಂಬೈ ಇಂಡಿಯನ್ಸ್ ತಂಡ ಮುಂಬೈನಲ್ಲಿದೆ. (ಏಜೆನ್ಸೀಸ್)