ಅಹಮದಾಬಾದ್: ರನ್ಪ್ರವಾಹ ಹರಿಸುವ ಮೂಲಕ ಕರ್ನಾಟಕ ತಂಡ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಗೆಲುವಿನ ಆರಂಭ ಕಂಡಿದೆ. ನಾಯಕ ಮಯಾಂಕ್ ಅಗರ್ವಾಲ್ (157 ರನ್, 133 ಎಸೆತ, 11 ಬೌಂಡರಿ, 8 ಸಿಕ್ಸರ್) ಮತ್ತು ಉಪನಾಯಕ ಆರ್. ಸಮರ್ಥ್ (123 ರನ್, 120 ಎಸೆತ, 11 ಬೌಂಡರಿ, 2 ಸಿಕ್ಸರ್) ಸೊಗಸಾದ ಶತಕದ ಬಲದಿಂದ ಕರ್ನಾಟಕ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಜಮ್ಮು&ಕಾಶ್ಮೀರ ಎದುರು 222 ರನ್ಗಳಿಂದ ಸುಲಭ ಗೆಲುವು ದಾಖಲಿಸಿತು.
ಮೊಟೆರಾದ ಸರ್ದಾರ್ ಪಟೇಲ್ ಬಿ ಗ್ರೌಂಡ್ನಲ್ಲಿ ನಡೆದ ಗುರುವಾರ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ಮಯಾಂಕ್-ಸಮರ್ಥ್ ಜೋಡಿ ಮೊದಲ ವಿಕೆಟ್ಗೆ ಪೇರಿಸಿದ 267 ರನ್ ಜತೆಯಾಟದ ನೆರವಿನಿಂದ 2 ವಿಕೆಟ್ಗೆ 402 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ವೇಗಿ ವೈಶಾಕ್ ವಿಜಯ್ಕುಮಾರ್ (57ಕ್ಕೆ 4) ದಾಳಿಗೆ ತತ್ತರಿಸಿದ ಜಮ್ಮು&ಕಾಶ್ಮೀರ 30.4 ಓವರ್ಗಳಲ್ಲಿ 180 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು.
ಮಯಾಂಕ್-ಸಮರ್ಥ್ ಜುಗಲ್ಬಂದಿ
ರಾಜ್ಯದ ಆರಂಭಿಕರಾದ ಮಯಾಂಕ್ ಅಗರ್ವಾಲ್&ಆರ್. ಸಮರ್ಥ್ ಜೋಡಿ ಜಮ್ಮು&ಕಾಶ್ಮೀರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ರನ್ಮಳೆ ಹರಿಸಿತು. ಮಯಾಂಕ್ ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳ ಮೇಲೆ ಆಕ್ರಮಣ ನಡೆಸಿದರೆ, ಸಮರ್ಥ್ ಸೂಕ್ತ ಬೆಂಬಲ ಒದಗಿಸಿದರು. ಮಯಾಂಕ್ 104 ಮತ್ತು ಸಮರ್ಥ್ 97 ಎಸೆತಗಳಲ್ಲಿ ಶತಕ ಪೂರೈಸಿದರು. ಪಂದ್ಯದ 39ನೇ ಓವರ್ನಲ್ಲಿ ಸಮರ್ಥ್, ರಸಿಕ್ ಸಲಾಮ್ ಯಾರ್ಕರ್ ಎಸೆತಕ್ಕೆ ಬೌಲ್ಡಾದರು. ನಂತರ ಕ್ರೀಸ್ಗೆ ಇಳಿದ ದೇವದತ್ ಪಡಿಕಲ್ (71*ರನ್, 35 ಎಸೆತ, 4 ಬೌಂಡರಿ, 5 ಸಿಕ್ಸರ್) ಸ್ಫೋಟಕ ಆಟವಾಡಿ ಮಯಾಂಕ್ ಜತೆ 2ನೇ ವಿಕೆಟ್ಗೆ 60 ರನ್ ಮತ್ತು ಮನೀಷ್ ಪಾಂಡೆ (23*) ಜತೆ ಮುರಿಯದ 3ನೇ ವಿಕೆಟ್ಗೆ 75 ರನ್ ಸೇರಿಸಿ ಮೊತ್ತವನ್ನು 400ರ ಗಡಿ ದಾಟಿಸಿದರು.
ಕರ್ನಾಟಕ: 2 ವಿಕೆಟ್ಗೆ 402 (ಸಮರ್ಥ್ 123, ಮಯಾಂಕ್ 157, ಪಡಿಕಲ್ 71*, ಮನೀಷ್ 23*, ರಿಸಿಕ್ 82ಕ್ಕೆ 1). ಜಮ್ಮು-ಕಾಶ್ಮೀರ: 30.4 ಓವರ್ಗಳಲ್ಲಿ 180 (ಖಜೂರಿಯಾ 29, ವಿವ್ರಾಂತ್ 41, ಯಧ್ವೀರ್ 64, ವೈಶಾಕ್ 57ಕ್ಕೆ 4, ಕೌಶಿಕ್ 31ಕ್ಕೆ 1, ವಿದ್ವತ್ 32ಕ್ಕೆ 1, ಜೆ. ಸುಚಿತ್ 10ಕ್ಕೆ 1).
*ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ಉತ್ತರಾಖಂಡ
ಯಾವಾಗ: ಶನಿವಾರ
ಆರಂಭ: ಬೆಳಗ್ಗೆ 9.00
*402: ಕರ್ನಾಟಕ ತಂಡ ದೇಶೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೊದಲ ಬಾರಿಗೆ 400 ಪ್ಲಸ್ ಮತ್ತು ತನ್ನ ಸರ್ವಾಧಿಕ ಮೊತ್ತ ಪೇರಿಸಿತು. 2014&15ರಲ್ಲಿ ಪಂಜಾಬ್ ಎದುರು 7 ವಿಕೆಟ್ಗೆ 359 ರನ್ ಕಲೆಹಾಕಿದ್ದು ಹಿಂದಿನ ಗರಿಷ್ಠ.
ಸೌರಾಷ್ಟ್ರಕ್ಕೆ ಕೇರಳ ಶಾಕ್
ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಕೇರಳ ಎದುರು 3 ವಿಕೆಟ್ಗಳಿಂದ ಆಘಾತಕಾರಿ ಸೋಲು ಅನುಭವಿಸಿತು. ವಿಶ್ವರಾಜ್ ಜಡೇಜಾ 98 ರನ್ ಗಳಿಸಿದ ನಡುವೆ ಸೌರಾಷ್ಟ್ರ 185 ರನ್ಗಳಿಗೆ ಸರ್ವಪತನ ಕಂಡರೆ, ಕೇರಳ 47.4 ಓವರ್ಗಳಲ್ಲಿ 7 ವಿಕೆಟ್ಗೆ 188 ರನ್ ಗಳಿಸಿ ಜಯಿಸಿತು.