ನವದೆಹಲಿ: ಕರೊನಾ ಮಹಾಮಾರಿಯಿಂದಾಗಿ ಕ್ರೀಡಾಲೋಕವೇ ಸ್ತಬ್ಧಗೊಂಡಿದ್ದು, ಭಾರತೀಯ ಕ್ರಿಕೆಟಿಗರಿಗೆ ಈಗ ಲಭಿಸಿರುವ ಬಿಡುವು ಕಠಿಣವಾದರೂ, ‘ಸ್ವಾತಗಾರ್ಹ ವಿಶ್ರಾಂತಿ’ಯಾಗಿದೆ ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಇತರೆಲ್ಲ ಕ್ರೀಡೆಗಳಂತೆ ಕ್ರಿಕೆಟ್ ಕೂಡ ಎಲ್ಲೆಡೆ ಸ್ಥಗಿತಗೊಂಡಿದ್ದು, ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಟೀಮ್ ಇಂಡಿಯಾ ಆಟಗಾರರೂ ಸದ್ಯ ತಮ್ಮ ತಮ್ಮ ಮನೆಗಳಲ್ಲೇ ಲಾಕ್ಡೌನ್ ಆಗಿದ್ದಾರೆ. ‘ಈ ವಿಶ್ರಾಂತಿ ಕೆಟ್ಟ ವಿಷಯವಲ್ಲ. ಯಾಕೆಂದರೆ ನ್ಯೂಜಿಲೆಂಡ್ ಪ್ರವಾಸದ ಬಳಿಕ ಕೆಲ ಆಟಗಾರರು ಮಾನಸಿಕ ಒತ್ತಡ, ದೈಹಿಕ ಕ್ಷಮತೆ ಮತ್ತು ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದರು’ ಎಂದು ರವಿಶಾಸ್ತ್ರಿ, ಸ್ಕೈ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ಆರ್ಥಟನ್, ನಾಸಿರ್ ಹುಸೇನ್ ಮತ್ತು ರಾಬ್ ಕೀ ಜತೆಗಿನ ಸಂವಾದದ ವೇಳೆ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆಟಗಾರರು ಈ ಸಮಯವನ್ನು ಮತ್ತೆ ಸಾಮರ್ಥ್ಯ ಸಂಪಾದಿಸಲು ಬಳಸಿಕೊಳ್ಳಬೇಕು. ಕಳೆದ ವರ್ಷದ ವಿಶ್ವಕಪ್ ನಂತರದಲ್ಲಿ ಭಾರತ ತಂಡದ ಆಟಗಾರರು 10-12 ದಿನಗಳನ್ನಷ್ಟೇ ಮನೆಯಲ್ಲಿ ಕಳೆದಿರಬಹುದು. ಕಳೆದ 10 ತಿಂಗಳಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಅದರ ಪರಿಣಾಮಗಳು ಎದುರಾಗುವ ಸಮಯದಲ್ಲೇ ಈ ಬಿಡುವು ಲಭಿಸಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಕಳೆದ ವರ್ಷ ವಿಶ್ವಕಪ್ನಲ್ಲಿ ಆಡುವ ಸಲುವಾಗಿ ಭಾರತ ತಂಡ ಮೇ 23ರಂದು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿತ್ತು. ನಂತರದಲ್ಲಿ ತಂಡದ ಕೆಲ ಆಟಗಾರರು ಎಲ್ಲ ಮೂರು ಪ್ರಕಾರದಲ್ಲೂ ಆಡಿದ್ದಾರೆ. ಅದರಿಂದ ಅವರು ಸಾಕಷ್ಟು ಬಳಲಿದ್ದರು. ಮೈದಾನಕ್ಕಿಳಿದು ಟಿ20ಯಿಂದ ಟೆಸ್ಟ್ ಕ್ರಿಕೆಟ್ಗೆ ಹೊಂದಿಕೊಳ್ಳುವುದರಿಂದ ಹಿಡಿದು ಪ್ರಯಾಣದ ಬಳಲಿಕೆಯನ್ನೂ ಅವರು ಎದುರಿಸಬೇಕಾಗಿತ್ತು ಎಂದು ರವಿಶಾಸ್ತ್ರಿ ವಿವರಿಸಿದ್ದಾರೆ.
ವಿಶ್ವಕಪ್ ನಂತರದಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದ ಭಾರತ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿತ್ತು. ನಂತರದಲ್ಲಿ ತವರಿನಲ್ಲೇ ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಿದ್ದ ಭಾರತ, ಪೂರ್ಣ ಪ್ರಮಾಣದ ನ್ಯೂಜಿಲೆಂಡ್ ಪ್ರವಾಸದಲ್ಲಿ 5 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಿತ್ತು.
ಕಿವೀಸ್ನಿಂದ ಭಾರತ ತಂಡ ನಿರ್ಗಮಿಸುವಾಗ ಅಲ್ಲಿ 2 ಕರೊನಾ ಪ್ರಕರಣಗಳಷ್ಟೇ ಇದ್ದವು. ಆದರೆ ಈಗ 300 ದಾಟಿದೆ. ನಾವು ಸರಿಯಾದ ಸಮಯದಲ್ಲೇ ಅಲ್ಲಿಂದ ತವರಿಗೆ ವಾಪಸಾಗಿದ್ದೆವು ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
ಲಾಕ್ಡೌನ್ ಅಗತ್ಯವಿತ್ತು
ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ನಂಥ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಭಾರತ ತಂಡದ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಸಮಯದಲ್ಲೇ ಅಭಿಪ್ರಾಯಪಟ್ಟಿದ್ದರು ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. 2ನೇ ಏಕದಿನ ಪಂದ್ಯಕ್ಕೆ ಮುನ್ನ ಸರಣಿ ರದ್ದುಗೊಂಡಾಗಲೇ ಇಂಥ ಕ್ರಮ ಎದುರಾಗುವ ನಿರೀಕ್ಷೆಯೂ ಇತ್ತು ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಕ್ರಿಕೆಟಿಗರು ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನಷ್ಟೇ ಮಾಡಬಹುದು. ಕೊಹ್ಲಿ ಈಗಾಗಲೆ ಇಂಥದ್ದನ್ನು ಮಾಡಿದ್ದಾರೆ. ಇತರ ಕ್ರಿಕೆಟಿಗರೂ ಸಾಮಾಜಿಕ ಜಾಲತಾಣದ ಮೂಲಕ ಕೈಜೋಡಿಸುತ್ತಿದ್ದಾರೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಡದೆ ಇರುವುದು ಸುರಕ್ಷಿತ ಎಂಬುದು ಅವರಿಗೆ ತಿಳಿದಿದೆ ಎಂದಿದ್ದಾರೆ.
ಕೊಹ್ಲಿ ಭಾರತೀಯ ಕ್ರಿಕೆಟ್ ಬಾಸ್!
ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಬಾಸ್ ಇದ್ದಂತೆ. ತಂಡದ ಸಿಬ್ಬಂದಿ ಅವರ ಮೇಲಿನ ಹೊರೆಯನ್ನು ಇಳಿಸುವ ಕೆಲಸವನ್ನಷ್ಟೇ ಮಾಡುತ್ತಾರೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಕೊಹ್ಲಿ ಸಾರಥ್ಯದಲ್ಲಿ ಭಾರತ ತವರಿನಲ್ಲಿ ಸತತ 12 ಟೆಸ್ಟ್ ಗೆದ್ದ ದಾಖಲೆ ಬರೆದಿದೆ. ‘ನಾಯಕನೇ ಯಾವಾಗಲೂ ಬಾಸ್ ಎಂಬುದು ನನ್ನ ನಂಬಿಕೆ. ಆಟಗಾರರು ಧೈರ್ಯದಿಂದ, ಸಕಾರಾತ್ಮಕವಾಗಿ, ನಿರ್ಭೀತಿಯ ಕ್ರಿಕೆಟ್ ಆಡುವಂತೆ ಸಾಧ್ಯವಾದಷ್ಟು ಪ್ರಯತ್ನಿಸುವುದಷ್ಟೇ ತರಬೇತಿ ಸಿಬ್ಬಂದಿಯ ಕೆಲಸ’ ಎಂದಿದ್ದಾರೆ. ‘ಫಿಟ್ನೆಸ್ನತ್ತ ಕೊಹ್ಲಿ ಅಪಾರ ಗಮನ ಹರಿಸುತ್ತಾರೆ. ಇದು ಬರೀ ವ್ಯಾಯಾಮದಲ್ಲಿ ಮಾತ್ರವಲ್ಲ, ಆಹಾರ ಕ್ರಮದ ಮೇಲೂ ಅಪಾರ ಕಾಳಜಿ ವಹಿಸುತ್ತಾರೆ. ಮಾಂಸಾಹಾರ ಇಷ್ಟ ಪಡುತ್ತಿದ್ದ ಅವರು ಒಂದು ದಿನ ಬಂದು, ನಾನೀಗ ಸಸ್ಯಾಹಾರಿ ಎಂದಿದ್ದರು. ಫಿಟ್ನೆಸ್ಗಾಗಿ ಈ ರೀತಿ ಅನೇಕ ತ್ಯಾಗ ಮಾಡಿದ್ದಾರೆ’ ಎಂದು ರವಿಶಾಸ್ತ್ರಿ ವಿವರಿಸಿದ್ದಾರೆ.