ಪ್ಯಾರಾಲಿಂಪಿಕ್​ಗೆ ಆಯ್ಕೆಯಾಗಿರುವ ಇಬ್ಬರು ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ರೂ. ಪ್ರೋತ್ಸಾಹಧನದ ಚೆಕ್ ಅನ್ನು ಕ್ರೀಡಾ ಸಚಿವ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್ ವಿತರಿಸಿದರು. 
ಕ್ರೀಡೆ

ಪ್ಯಾರಾಲಿಂಪಿಕ್​ನಲ್ಲಿ ಚಿನ್ನ ಗೆದ್ದರೆ 5 ಕೋಟಿ ರೂಪಾಯಿ ನಗದು; ಕ್ರೀಡಾ ಸಚಿವ ನಾರಾಯಣಗೌಡ ಘೋಷಣೆ

ಬೆಂಗಳೂರು: ಜಪಾನ್​ನ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್​ಗೆ ಆಯ್ಕೆಯಾಗಿರುವ ಇಬ್ಬರು ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಯಿತು. ಪ್ಯಾರಾ ಪವರ್ ಲಿಪ್ಟಿಂಗ್​ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಅವರಿಗೆ ಕ್ರೀಡಾ ಸಚಿವ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್ ಪ್ರೋತ್ಸಾಹ ಧನದ ಚೆಕ್ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ‘ಶಿಖರದಿಂದ ಸಾಗರ’ ಹೆಸರಿನ ಸಾಹಸ ಯಾತ್ರೆಗೆ ಹಸಿರು ನಿಶಾನೆ ತೋರಿದ ನಾರಾಯಣಗೌಡ ಮಾತನಾಡಿ, ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ ಸರ್ಕಾರದಿಂದ 5 ಕೋಟಿ ರೂ., ಬೆಳ್ಳಿ ಪದಕ ಗೆದ್ದರೆ 3 ಕೋಟಿ ರೂ. ಹಾಗೂ ಕಂಚಿನ ಪದಕ ಗೆದ್ದರೆ 2 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ದೈಹಿಕ ಶಿಕ್ಷಣಕ್ಕೆ ಸಮಯ ಮೀಸಲಿಡಬೇಕು. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಪ್ರತಿಯೊಂದು ಶಾಲೆಗೂ ಕಡ್ಡಾಯವಾಗಿ ಮೈದಾನ ಇರಬೇಕು. ಒಂದು ವೇಳೆ ಮೈದಾನ ಇಲ್ಲದಿದ್ದಲ್ಲಿ ಬಾಡಿಗೆ ಆಧಾರದಲ್ಲಾದರೂ ಮೈದಾನ ಪಡೆದು, ಮಕ್ಕಳಿಗೆ ದೈಹಿಕ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಶಾಲೆಗಳು ಸರ್ಕಾರದ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆಯನ್ನೇ ರದ್ದು ಮಾಡುವಂತೆಯೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು. ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಶಿಖರದಿಂದ ಸಾಗರ ಅಭಿಯಾನದಲ್ಲಿ ರಾಜ್ಯದ ಐವರು ಯುವತಿಯರು ಕಾಶ್ಮೀರದಲ್ಲಿ ಕೋಲ್ಹೊಯ್ (5425 ಮೀ.) ಶಿಖರವನ್ನು ಏರುವ ಮೂಲಕ ಶುರುವಾಗಿ, ತದನಂತರ 3,000 ಕಿ.ಮೀ. ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ. ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಿ ಈ ಯಾನ ಮುಕ್ತಾಯಗೊಳಿಸಲಾಗುತ್ತದೆ ಎಂದರು.

ಕೋಚರ್​ಗಳಿಗೆ ಕಾರ್ಯಭಾರ ಕೊಡಿ: ಒಲಂಪಿಕ್ ಅಸೋಷಿಯೇಷನ್ ಕರ್ನಾಟಕ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್ ಮಾತನಾಡಿ, ಕೆಲ ಕೋಚರ್​ಗಳು ತರಬೇತಿ ನೀಡುವುದನ್ನು ಬಿಟ್ಟು ಸೈಡ್ ಬಿಜಿನೆಸ್ ಶುರು ಮಾಡಿಕೊಂಡಿದ್ದಾರೆ. ಆದ್ದರಿಂದ ಕೋಚರ್​ಗಳಿಗೆ ನಿರ್ದಿಷ್ಟ ಕಾರ್ಯಭಾರ ನೀಡಬೇಕು ಎಂದು ಆಗ್ರಹಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ವೆಂಕಟೇಶ್ ಇದ್ದರು.

ಪ್ಯಾರಾಲಿಂಪಿಕ್​ನಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಖುಷಿಯಾಗುತ್ತದೆ. ಕೋವಿಡ್ ಕಾರಣ ಇಲ್ಲಿಗೆ ಬಂದು ತರಬೇತಿ ಪಡೆಯಬೇಕಾಯಿತು. ನನಗೆ ಪದಕ ಗೆಲ್ಲುವ ವಿಶ್ವಾಸವಿದೆ

| ನಿರಂಜನ್ ಮುಕುಂದನ್ ಕ್ರೀಡಾಪಟು