ಕ್ರೀಡೆ

ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದ್ದು ಏಕೆ..?

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಇಂದು (ನ.15) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನ. 24 ವರ್ಷಗಳ ಕಾಲ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲೇ ತಮ್ಮದೇ ಛಾಪು ಮೂಡಿಸಿದ ಆಟಗಾರ ಸಚಿನ್. 1989ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ ಸಚಿನ್, 2013ರಲ್ಲಿ ತವರು ಮೈದಾನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೇ ಪಂದ್ಯವಾಡಿದರು. ಸಚಿನ್ ಪದಾರ್ಪಣೆ ದಿನವನ್ನು ನೆನಪಿಸುವ ಸಲುವಾಗಿ ಬಿಸಿಸಿಐ, ಟ್ವಿಟರ್‌ನಲ್ಲಿ ಮೊದಲ ಹಾಗು ಕೊನೇ ಪಂದ್ಯದ ಫೋಟೋ ಪ್ರಕಟಿಸಿದೆ.

ವಿಶ್ವದಾದ್ಯಂತ ಬಿಲಿಯನ್‌ಗಟ್ಟಲೇ ಅಭಿಮಾನಿಗಳನ್ನು ಸಂಪಾದಿಸಿದ ನಿಮಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಲಾಗಿದೆ. ಸಚಿನ್ ಆಡಿದ ಮೊದಲ ಪಂದ್ಯದಲ್ಲಿ ಕೇವಲ 15 ರನ್‌ಗಳಿಸಿ ಪಾಕ್ ವೇಗಿ ವಾಕರ್ ಯೂನಿಸ್‌ಗೆ ವಿಕೆಟ್ ನೀಡಿದ್ದರು. ಕಡೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 74 ರನ್ ಗಳಿಸಿದ್ದರು.

ವಿಶ್ವಕ್ರಿಕೆಟ್‌ನಲ್ಲಿ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳು ಸೇರಿವೆ. ಜತೆಗೆ 6 ಏಕದಿನ ವಿಶ್ವಕಪ್ ಆಡಿದ್ದಾರೆ. 2011ರಲ್ಲಿ ಆಡಿದ ತಮ್ಮ ಕಡೇ ವಿಶ್ವಕಪ್‌ನಲ್ಲಿ ಭಾರತ ಟ್ರೋಫಿ ಜಯಿಸಿತ್ತು. 2010ರಲ್ಲಿ ಸಚಿನ್ ತೆಂಡುಲ್ಕರ್, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಗ್ವಾಲಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಈ ಸಾಧನೆ ಮಾಡಿದ್ದರು.