ಚೆನ್ನೈ: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈ ಮಧ್ಯೆ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮುಂದಿನ ವರ್ಷ ಐಪಿಎಲ್ ಆರಂಭಕ್ಕೂ ಮುನ್ನ ನಡೆಯಲಿರುವ ಮೆಗಾ ಹರಾಜು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ತಂಡಗಳು ಆಟಗಾರರನ್ನು ಉಳಿಸಿಕೊಳ್ಳಲು ಭರ್ಜಿ ಯೋಜನೆ ರೂಪಿಸುತ್ತಿದ್ದು, ಇದರಲ್ಲಿ ಚೆನ್ನೈ ಸೂಪರ್ಕಿಂಗ್ಸ್ ಒಂದು ಹೆಜ್ಜೆ ಮುಂದಿದೆ ಎಂದು ಹೇಳಿದರೆ ತಪ್ಪಾಗಲಾರದು.
ಐಪಿಎಲ್ ನಿಯಮದ ಪ್ರಕಾರ ಫ್ರಾಂಚೈಸಿಯೊಂದಕ್ಕೆ ನಾಲ್ವರು ಆಟಗಾರರನ್ನು ರಿಟೇನ್ ಮಾಡುವ ಅವಕಾಶ ನೀಡಲಾಗಿದ್ದು, ಒಂದು ವೇಳೆ ಇದೇ ನಿಯಮ ಮುಂದುವರೆದಲ್ಲಿ ಧೋನಿ ಅವರನ್ನು ವಿಧಿಯಿಲ್ಲದೆ ತಂಡದಿಂದ ಕೈಬಿಡಬೇಕಾಗುತ್ತದೆ. ಹೀಗಾಗಿ ಧೋನಿಯನ್ನು ಉಳಿಸಿಕೊಳ್ಳಲು ಸಿಎಸ್ಕೆ ಭರ್ಜರಿ ಪ್ಲ್ಯಾನ್ ರೂಪಿಸಿದ್ದು, ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಾರದು.
ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸಿಯು ತನ್ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದೆ. ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಲಿಸ್ಟ್ನಲ್ಲಿ ಉಳಿಸಿಕೊಳ್ಳಲು ಸಿಎಸ್ಕೆ ಫ್ರಾಂಚೈಸಿ ಯೋಜನೆ ರೂಪಿಸಿದ್ದು, ಇದಕ್ಕಾಗಿ 2008ರ ಹರಾಜಿನ ನಿಯಮವನ್ನು ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಮಾಲೀಕರ ಮತ್ತು ಬಿಸಿಸಿಐ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂತಹದೊಂದು ಬೇಡಿಕೆಯನ್ನು ಪ್ರಸ್ತಾಪಿಸಿದೆ.
ಇದನ್ನೂ ಓದಿ: ನನ್ನ ಕೋಚಿಂಗ್ ಜೀವನದ ಅತ್ಯಂತ ಕಷ್ಟಕರವಾದ, ಕೆಟ್ಟ ಸರಣಿ ಇದು; ಮಾಜಿ ಕೋಚ್ ದ್ರಾವಿಡ್ ಹೇಳಿಕೆ ವೈರಲ್
ಐಪಿಎಲ್ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದು. ಆದರೆ ಈ ನಿಯಮವು ಬಳಕೆಗೆ ಬರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೀಗ ಅದೇ ನಿಯಮವನ್ನು ಜಾರಿಗೆ ತರುವಂತೆ ಸಿಎಸ್ಕೆ ಆಗ್ರಹಿಸಿದೆ.
ಸಿಎಸ್ಕೆ ಫ್ರಾಂಚೈಸಿಯು ಈ ನಿಯಮವನ್ನು ಜಾರಿಗೆ ತರುವಂತೆ ಆಗ್ರಹಿಸಲು ಮುಖ್ಯ ಕಾರಣ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗುತ್ತಿರುವುದು. ಇದೀಗ ಈ ನಿಯಮ ಜಾರಿಯಾದರೆ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಬಹುದು. ಅದು ಸಹ ಕಡಿಮೆ ಮೊತ್ತವನ್ನು ನೀಡುವ ಮೂಲಕ ಎಂಬುದು ಎಲ್ಲರೂ ಗಮನಿಸಬೇಕಾದ ಸಂಗತಿ.
ಚೆನ್ನೈ ಸೂಪರ್ಕಿಂಗ್ಸ್ ಫ್ರಾಂಚೈಸಿ ಮನವಿಗೆ ಬೇರೆ ತಂಡಗಳು ವಿರೋಧಿಸಿದ್ದು, ಈ ನಿಮಯವು ಜಾರಿಗೆ ಬರುತ್ತಾ ಇಲ್ಲವಾ ಎಂಬುದೇ ಈಗ ಕುತೂಹಲವಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.