ಕ್ರೀಡೆ

ಖೇಲ್​ರತ್ನ ಪ್ರಶಸ್ತಿಗೆ ಅರ್ಜಿ ಸಲ್ಲಿಸುವಾಗ ಲೋಪ; ನನ್ನಿಂದಲೇ ತಪ್ಪಾಗಿದೆ ಎಂದ ಶೂಟರ್​ ಮನು ಭಾಕರ್​!

ನವದೆಹಲಿ: ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ ಪ್ರಶಸ್ತಿಯ ಶಿಾರಸು ಪಟ್ಟಿಯಲ್ಲಿ ತನ್ನ ಹೆಸರಿಲ್ಲದೆ ವಿವಾದ ಸೃಷ್ಟಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಪ್ಯಾರಿಸ್​ ಒಲಿಂಪಿಕ್ಸ್​ ಅವಳಿ ಕಂಚಿನ ತಾರೆ ಮನು ಭಾಕರ್​, ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವೇಳೆ ತನ್ನಿಂದಲೇ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಪ್ರಶಸ್ತಿ ಕಡೆಗಣನೆಯ ಬಗ್ಗೆ ತನ್ನ ತಂದೆ ಮತ್ತು ಕೋಚ್​ ಜಸ್ಪಾನ್​ ರಾಣಾ ಕ್ರೀಡಾ ಸಚಿವಾಲಯದ ವಿರುದ್ಧ ಹೇಳಿಕೆಗಳನ್ನು ನೀಡಿದ ಬೆನ್ನಲ್ಲೇ ಮನು ಭಾಕರ್​, "ಡ್ಯಾಮೇಜ್​ ಕಂಟ್ರೋಲ್​'ಗೆ ಪ್ರಯತ್ನಿಸಿದ್ದಾರೆ.

2024ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆಯ್ಕೆ ಸಮಿತಿ ಈಗಾಗಲೆ ಕ್ರೀಡಾಪಟುಗಳ ಹೆಸರುಗಳನ್ನು ಶಿಾರಸು ಮಾಡಿದ್ದರೂ, ಇದು ಅಂತಿಮ ಪಟ್ಟಿ ಅಲ್ಲ. ಮನು ಹೆಸರನ್ನು ಪಟ್ಟಿಗೆ ಸೇರಿಸಲು ಇನ್ನೂ ಅವಕಾಶವಿದೆ ಎಂದು ಕ್ರೀಡಾ ಸಚಿವಾಲಯ ಸೋಮವಾರವೇ ಸ್ಪಷ್ಟನೆ ನೀಡಿದೆ. ಇದರ ನಡುವೆ ಮನು ತಂದೆ ರಾಮ್​ಕಿಶನ್​ ಭಾಕರ್​, ಮಗಳನ್ನು ಶೂಟರ್​ ಮಾಡಿ ತಪು$್ಪ ಮಾಡಿದೆ. ಆಕೆಯನ್ನು ಕ್ರಿಕೆಟರ್​ ಮಾಡಬೇಕಿತ್ತು. ನಾನು ಒಲಿಂಪಿಕ್ಸ್​ಗೆ ಹೋಗಿ ದೇಶಕ್ಕಾಗಿ ಪದಕಗಳನ್ನು ಗೆದ್ದು ತರಬಾರದಿತ್ತು ಎಂದು ಆಕೆ ಬೇಸರಿಸುತ್ತಿದ್ದಾಳೆ ಎಂದಿದ್ದರು. ಪ್ರಶಸ್ತಿಗೆ ಮನು ಹೆಸರನ್ನು ಈ ರೀತಿಯಾಗಿ ಕಡೆಗಣಿಸಿದರೆ ಆಕೆಯ ಆತ್ಮವಿಶ್ವಾಸಕ್ಕೆ ಹೊಡೆತ ಬೀಳಲಿದೆ ಎಂದು ಕೋಚ್​ ಜಸ್ಪಾಲ್​ ರಾಣಾ, ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಶೂಟಿಂಗ್​ ಸಂಸ್ಥೆಯನ್ನು ದೂರಿದ್ದರು.

ಇದರ ಬೆನ್ನಲ್ಲೇ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿರುವ 22 ವರ್ಷದ ಮನು, "ಕ್ರೀಡಾಪಟುವಾಗಿ ನನ್ನ ಕೆಲಸ ದೇಶದ ಪರ ಸ್ಪರ್ಧಿಸುವುದು ಮತ್ತು ಉತ್ತಮ ನಿರ್ವಹಣೆ ತೋರುವುದು ಆಗಿದೆ. ಪ್ರಶಸ್ತಿಗಳು ಪ್ರೇರಣೆ ತುಂಬುತ್ತವೆ ನಿಜ. ಅವೇ ನನ್ನ ಗುರಿ ಅಲ್ಲ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವೇಳೆ ನನ್ನಿಂದ ಲೋಪವಾಗಿದೆ. ಅದನ್ನು ಸರಿಪಡಿಸಲಾಗುತ್ತಿದೆ. ಪ್ರಶಸ್ತಿ ಸಿಕ್ಕರೂ, ಸಿಗದಿದ್ದರೂ, ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಸ್ಫೂರ್ತಿಗೆ ಕೊರತೆಯಾಗುವುದಿಲ್ಲ. ಈ ವಿಷಯದಲ್ಲಿ ಯಾವುದೇ ಊಹಾಪೋಹಗಳನ್ನು ಹರಡಬೇಡಿ ಎಂದು ಎಲ್ಲರಿಗೂ ಮನವಿ ಸಲ್ಲಿಸುವೆ' ಎಂದು ಬರೆದುಕೊಂಡಿದ್ದಾರೆ.