ಕ್ರೀಡೆ

ಟಿ20 ವಿಶ್ವಕಪ್ ಮೊದಲ ಸುತ್ತು; ಓಮನ್ ಗೆಲ್ಲಿಸಿದ ಭಾರತೀಯ ಮೂಲದ ಆಟಗಾರ

ಮಸ್ಕತ್: ಭಾರತೀಯ ಮೂಲದ ಆರಂಭಿಕರಾದ ಜತಿಂಧರ್ ಸಿಂಗ್ (73*ರನ್, 42 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಅಕಿಬ್ ಐಲ್ಯಾಸ್ (50*ರನ್, 43 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಓಮನ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಮೊದಲ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ (ಪಿಎನ್‌ಜಿ) ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು.

ಅಲ್ ಅಮೆರಾತ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಿಎನ್‌ಜಿ ತಂಡ 9 ವಿಕೆಟ್‌ಗೆ 129 ರನ್ ಪೇರಿಸಿದರೆ, ಬಳಿಕ ಓಮನ್ ತಂಡ ಆರಂಭಿಕರ ನೆರವಿನಿಂದ 13.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 131 ರನ್‌ಗಳಿಸಿ ಜಯದ ನಗೆ ಬೀರಿತು. ಓಮನ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಂಗಳವಾರ ಎದುರಿಸಿದರೆ, ಅದೇ ದಿನ ಪಿಎನ್‌ಜಿ ತಂಡ ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ.

ಪಪುವಾ ನ್ಯೂ ಗಿನಿ: 9 ವಿಕೆಟ್‌ಗೆ 129 (ಅಸಾದ್ ವಾಲಾ 56, ಚಾರ್ಲ್ಸ್ ಅಮಿನಿ 37, ಸೆಸೆ ಬೌ 13, ಜೀಶಾನ್ ಮಕ್ಸೂದ್ 20ಕ್ಕೆ 4, ಬಿಲಾಲ್ ಖಾನ್ 16ಕ್ಕೆ 2, ಕಲೀಮುಲ್ಲಾ 19ಕ್ಕೆ 2), ಓಮನ್: 13.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 131 (ಜತಿಂದರ್ ಸಿಂಗ್ 73*, ಅಕಿಬ್ ಐಲ್ಯಾಸ್ 50*).