ಪ್ಯಾರಿಸ್: ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಈವರೆಗೂ ಸೋಲೇ ಕಾಣದ ಜಪಾನಿನ ಯುಯಿ ಸುಸಾಕಿ ಎದುರು ತನ್ನ ಪರಾಕ್ರಮ ಮೆರೆದ ಭಾರತದ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಗೆದ್ದು ಕ್ವಾರ್ಟರ್-ಫೈನಲ್ ತಲುಪಿದ್ದಾರೆ.
ಕುಸ್ತಿ ಸ್ಪರ್ಧೆಯ 16ನೇ ಸುತ್ತಿನಲ್ಲಿ 3-2 ಅಂಕಗಳ ಅಂತರದಲ್ಲಿ ಸುಸಾಕಿಯನ್ನು ಸೋಲಿಸಿ ವಿನೇಶ್ ಪೋಗಟ್, ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಇದೇ ಸುಸಾಕಿ, ಕಳೆದ ಟೊಕಿಯೋ ಒಲಿಂಪಿಕ್ಸ್ನಲ್ಲಿ ಪ್ರತಿಸ್ಪರ್ಧಿಗೆ ಒಂದೇ ಒಂದು ಅಂಕವನ್ನು ಬಿಟ್ಟುಕೊಡದೇ ಅಜೇಯವಾಗಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಇಂತಹ ಅಗ್ರ ಕ್ರಮಾಂಕದ ಕುಸ್ತಿಪಟುವಿಗೆ ಸೋಲಿನ ರುಚಿ ತೋರಿಸುವ ಮೂಲಕ ವಿನೇಶ್ ಫೋಗಟ್ ತನ್ನ ಪರಾಕ್ರಮ ಮೆರೆದಿದ್ದಲ್ಲದೆ, ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಸಾಕಿಯನ್ನು ಸೋಲಿಸಿದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಭಾಜನರಾಗಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ವಿನೇಶ್ ಅವರು 50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದು ಇದೇ ಮೊದಲು.
ಮಹಿಳೆಯರ 50 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವಿನೇಶ್ ಫೋಗಟ್ ಅವರು ಯೂಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು ಎದುರಿಸಲಿದ್ದಾರೆ. ಸದ್ಯ ವಿನೇಶ್ ಅವರು ತನ್ನ ಮೂರನೇ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಪದಕದ ಕನಸನ್ನು ಜೀವಂತವಾಗಿ ಇರಿಸಿಕೊಂಡಿದ್ದಾರೆ. (ಏಜೆನ್ಸೀಸ್)