ಕ್ರೀಡೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಧಾರಣೆಗೆ ಸ್ವಸಹಾಯ ಪದ್ಧತಿ!

ಪ್ರಸಾದ್​ ಶೆಟ್ಟಿಗಾರ್​

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲುವಿನಂತೆ, ಪದಕ ಪ್ರದಾನ ಸಮಾರಂಭದಲ್ಲಿ ಅದನ್ನು ಗಣ್ಯರಿಂದ ಕೊರಳಿಗೆ ಹಾಕಿಸಿಕೊಳ್ಳುವುದು ಕೂಡ ವಿಶೇಷವಾದ ಕ್ಷಣ. ಆದರೆ ಟೋಕಿಯೊ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಅದನ್ನು ಕೊರಳಿಗೆ ಹಾಕಲು ಯಾರೂ ಬರುವುದಿಲ್ಲ. ಪದಕ ಪ್ರದಾನ ಸಮಾರಂಭಗಳಲ್ಲಿ ಕ್ರೀಡಾಪಟುಗಳು ತಾವು ಗೆದ್ದ ಪದಕಗಳನ್ನು ತಾವೇ ಕೊರಳಿಗೆ ಏರಿಸಿಕೊಳ್ಳುವ ಸ್ವಸಹಾಯ ಪದ್ಧತಿ ಅನುಸರಿಸಬೇಕಾಗಿದೆ. ಕರೊನಾ ವೈರಸ್ ಹರಡುವಿಕೆಯ ಭೀತಿ ಇಂಥದ್ದೊಂದು ಬದಲಾವಣೆಗೆ ಕಾರಣವಾಗಿದೆ.

ಟೋಕಿಯೊದಲ್ಲಿ ನಡೆಯಲಿರುವ 339 ಪದಕ ಪ್ರದಾನ ಸಮಾರಂಭದಲ್ಲೂ ಕ್ರೀಡಾಪಟುಗಳು ತಾವು ಗೆದ್ದ ಪದಕ ಮಾಲೆಯನ್ನು ತಾವೇ ಕೊರಳಿಗೆ ಹಾಕಿಕೊಳ್ಳಬೇಕು. ಕರೊನಾದಿಂದಾಗಿ ಹಿಂದಿನ ಸಂಪ್ರದಾಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಬುಧವಾರ ತಿಳಿಸಿದ್ದಾರೆ.

ಪದಕ ಪ್ರದಾನ ಸಮಾರಂಭದಲ್ಲಿ ಪದಕಗಳನ್ನು ಟ್ರೇನಲ್ಲಿ ಇಟ್ಟು ಕ್ರೀಡಾಪಟುಗಳಿಗೆ ವಿತರಿಸಲಾಗುತ್ತದೆ. ಬಳಿಕ ಕ್ರೀಡಾಪಟುಗಳು ಪದಕ ಮಾಲೆಯನ್ನು ತಾವೇ ಕೊರಳಿಗೆ ಹಾಕಿಕೊಳ್ಳಬಹುದು. ಪದಕಗಳನ್ನು ಟ್ರೇನಲ್ಲಿ ಇಡುವ ವ್ಯಕ್ತಿಗಳೂ ಗ್ಲೌಸ್ ಹಾಕಿರುತ್ತಾರೆ. ಈ ಮೂಲಕ ಪದಕಗಳನ್ನು ಯಾವ ಸೋಂಕಿತರೂ ಸ್ಪರ್ಶಿಸದಿರುವುದನ್ನು ಖಚಿತಪಡಿಸಲಾಗಿರುತ್ತದೆ ಎಂದು ಬಾಚ್ ವಿವರಿಸಿದ್ದಾರೆ.

ಇತ್ತೀಚೆಗೆ ಯುರೋಪ್‌ನಲ್ಲಿ ನಡೆದ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ವಿಜೇತರಿಗೆ ಯುಇಎ್ಎ ಅಧ್ಯಕ್ಷ ಅಲೆಕ್ಸಾಂಡರ್ ಸೆೆರಿನ್ ಖುದ್ದಾಗಿ ಪದಕಗಳನ್ನು ಹಾಕಿದ್ದರು. ಆದರೆ ಟೋಕಿಯೊದಲ್ಲಿ ಯಾವ ಅಪಾಯವನ್ನೂ ಎಳೆದುಕೊಳ್ಳಲು ಸಂಘಟಕರು ಮುಂದಾಗಿಲ್ಲ. ಹಿಂದೆಲ್ಲ ಒಲಿಂಪಿಕ್ಸ್ ಪದಕ ಪ್ರದಾನ ಸಮಾರಂಭದಲ್ಲಿ ಐಒಸಿ ಸದಸ್ಯರು ಅಥವಾ ವಿಶ್ವದ ವಿವಿಧ ಕ್ರೀಡಾ ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ವಿಜೇತರ ಕೊರಳಿಗೆ ಪದಕ ಮಾಲೆಯನ್ನು ಹಾಕುವುದು ಸಂಪ್ರದಾಯವಾಗಿತ್ತು.

ಹ್ಯಾಂಡ್‌ಶೇಕ್, ಅಪ್ಪುಗೆಯೂ ಇಲ್ಲ
ಪದಕ ಪ್ರದಾನ ಸಮಾರಂಭದಲ್ಲಿ ಕ್ರೀಡಾಪಟುಗಳು ಪರಸ್ಪರ ಹಸ್ತಲಾಘವ ಮತ್ತು ಅಪ್ಪುಗೆಯನ್ನೂ ಮಾಡುವಂತಿಲ್ಲ ಎಂದು ಬಾಚ್ ಸ್ಪಷ್ಟಪಡಿಸಿದ್ದಾರೆ. ಪದಕ ಪ್ರದಾನ ಸಮಾರಂಭದಲ್ಲಿ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಮಾಸ್ಕ್ ಧರಿಸಿಯೇ ಭಾಗವಹಿಸಬೇಕೆಂದು ಈ ಮೊದಲೇ ಸೂಚನೆ ನೀಡಲಾಗಿತ್ತು.