ಕ್ರೀಡೆ

ಇತಿಹಾಸ ನಿರ್ಮಿಸಿದ ನೀರಜ್​ಗೆ ಬಹುಮಾನಗಳ ಸುರಿಮಳೆ... ಇಲ್ಲಿದೆ ಅದರ ಲಿಸ್ಟ್

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್​​ ಚೋಪ್ರಾ ಅವರಿಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದೆ.

ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಎಸೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ನಗದು-ಸರ್ಕಾರಿ ಉದ್ಯೋಗ ಘೋಷಿಸಿದ ಹರಿಯಾಣ ಸಿಎಂ:

ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ಸ್​ ಚಿನ್ನದ ಪದಕ ಗೆದ್ದ 23 ವರ್ಷದ ನೀರಜ್ ಚೋಪ್ರಾ ಅವರಿಗೆ ಮೊದಲು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಕ್ಲಾಸ್-1 ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. 

ಬಂಪರ್ ಕೊಡುಗೆ ನೀಡಿದ ಬಿಸಿಸಿಐ:

ಚಿನ್ನದ ಪದಕ ಗೆದ್ದ ನೀರಜ್​ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಕೋಟಿ ರೂ. ಬಹುಮಾನ ಘೋಷಿಸಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

2 ಕೋಟಿ ಬಹುಮಾನ ಘೋಷಿಸಿದ ಪಂಜಾಬ್ ಸಿಎಂ:

ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್‌ 2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಚೋಪ್ರಾ ಕುಟುಂಬವು ಪಂಜಾಬ್ ಮೂಲದ್ದಾಗಿದ್ದು, ಇದು ಪಂಜಾಬ್‌ ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. 

ಸಿಎಸ್​​ಕೆಯಿಂದಲೂ ಬಹುಮಾನ:

ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್‌ ಲೀಗ್‌ನ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯೂ 1 ಕೋಟಿ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ.

ಉಚಿತ ಸೇವೆ ನೀಡಿದ ಇಂಡಿಗೋ:

ವಿಮಾನಯಾನ ಸಂಸ್ಥೆ ಇಂಡಿಗೋ ಭಾರತದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ನೀರಜ್​ಗೆ ಒಂದು ವರ್ಷಗಳ ಕಾಲ ಉಚಿತ ಸೇವೆ ನೀಡುವುದಾಗಿ ತಿಳಿಸಿದೆ.

ಐಶಾರಾಮಿ ಕಾರು ನೀಡಿದ ಮಹಿಂದ್ರಾ:

ಭಾರತದ ಕಾರು ತಯಾರಿಕಾ ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್‌ ಮಹಿಂದ್ರಾ ಅವರು ನೂತನ ಎಕ್ಸ್‌ಯುವಿ 700 ಐಶಾರಾಮಿ ಕಾರನ್ನು ನೀರಜ್‌ಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಕೋಟಿ ನೀಡಿದ ಒಡಿಶಾ ಮತ್ತು ಮಣಿಪುರ:

ನೀರಜ್​ ಮಾಡಿದ ಐತಿಹಾಸಿಕ ಸಾಧನೆಗೆ ಒಡಿಶಾ ಸರಕಾರ 1 ಕೋಟಿ ರೂ. ಮಣಿಪುರ ಸರಕಾರ ಕೂಡ 1 ಕೋಟಿ ರೂ. ಘೋಷಿಸಿದೆ. ಈ ಮೂಲಕ ಚಿಕ್ಕ ರಾಜ್ಯಗಳಾದರೂ ಬಹುಮಾನ ಘೋಷಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

ಲೈಫ್​​ ಟೈಮ್​ ಉಚಿತ ಸೇವೆ ನೀಡಿದ ಕೆಎಸ್​​ಆರ್​ಟಿಸಿ:

ಚಿನ್ನದ ಪದಕ ಮುಡಿಗೇರಿಸಿಕೊಂಡ ನೀರಜ್​ ಜೀವಿತಾವಧಿವರೆಗೆ ದೇಶದ ಯಾವುದೇ ಸ್ಥಳದಿಂದ ನಿಗಮದ ಎಲ್ಲಾ ಬಸ್​​ನಿಂದಲೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೇಳಿದೆ.
ಈ ನಡುವೆ ರಿಯಾಲಿಟಿ ಸಂಸ್ಥೆ ಎಲಾನ್‌ ಗ್ರೂಪ್‌ನ ಮುಖ್ಯಸ್ಥ ರಾಕೇಶ್‌ ಕಪೂರ್‌ ಕೂಡ 25 ಲಕ್ಷ ರೂ.ಗಳ ಬಹುಮಾನ ನೀಡಲು ಮುಂದಾಗಿದ್ದಾರೆ.

ಒಟ್ಟರೆ ವಿವಿಧ ಮೂಲಗಳಿಂದ ನೀರಜ್‌ಗೆ ಈವರೆಗೆ ಒಟ್ಟು 12 ಕೋಟಿ 25 ಲಕ್ಷ ರೂ. ಬಹುಮಾನ ಮೊತ್ತ ಹರಿದು ಬಂದಿದೆ.