ಟೋಕಿಯೋ : ಜಪಾನಿನ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ 2020 ಒಲಿಂಪಿಕ್ಸ್ನಲ್ಲಿ ಭಾರತೀಯ ಆಟಗಾರರ ಕೊನೆಯ ಎರಡು ಸ್ಪರ್ಧೆಗಳು ಇಂದು ಮಧ್ಯಾಹ್ನದ ನಂತರ ನಡೆಯಲಿವೆ. ದೇಶದ ಪದಕದ ಆಸೆಯು ಇನ್ನಿಬ್ಬರು ಆಟಗಾರರ ಮೇಲೆ ಅವಲಂಬಿತವಾಗಿದೆ.
ಮಧ್ಯಾಹ್ನ 3.55 ಕ್ಕೆ ನಿಗದಿಯಾಗಿರುವ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದ ಪಂದ್ಯದಲ್ಲಿ ಕುಸ್ತಿಪಟು ಭಜರಂಗ್ ಪುನಿಯ ಅವರು ಕಂಚಿನ ಪದಕಕ್ಕಾಗಿ ಸೆಣೆಸಲಿದ್ದಾರೆ.
ಪುರುಷರ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರ ಅವರು ಅಂತಿಮ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದು, ಸಂಜೆ 4.30 ಕ್ಕೆ ಈ ಸ್ಪರ್ಧೆ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ 23 ವರ್ಷ ವಯಸ್ಸಿನ ನೀರಜ್, ಭಾರತಕ್ಕೆ ಚಿನ್ನದ ಆಸೆ ಹುಟ್ಟಿಸಿದ್ದಾರೆ.
ಇಂದು ಬೆಳಗಿನ ಜಾವದಿಂದಲೇ ಆರಂಭವಾಗಿ ನೆರವೇರಿದ ಮಹಿಳೆಯರ ಗಾಲ್ಫ್ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರಿನ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಗಳಿಸಿದ್ದು, ಪದಕ ಕೈತಪ್ಪಿದೆ. (ಏಜೆನ್ಸೀಸ್)