ನ್ಯೂಯಾರ್ಕ್: ಅಮೆರಿಕದ ಓಟದ ತಾರೆ ಶಾಕಾರಿ ರಿಚರ್ಡ್ಸನ್ ತನ್ನ ಬಾಯ್ಫ್ರೆಂಡ್ ಮತ್ತು ಸಹ-ಅಥ್ಲೀಟ್ ಕ್ರಿಶ್ಚಿಯನ್ ಕೋಲ್ಮನ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಜುಲೈ 27ರ ಭಾನುವಾರ ರಾತ್ರಿ ಸಿಟಲ್-ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದರು. ಯುಎಸ್ ಟ್ರ್ಯಾಂಕ್ ಆಂಡ್ ಫೀಲ್ಡ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲು ಓರೆಗಾನ್ಗೆ ತೆರಳುತ್ತಿದ್ದಾಗ 25 ವರ್ಷದ ವಿಶ್ವ ಚಾಂಪಿಯನ್ ಶಾಕಾರಿ ಅವರನ್ನು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಯಿತು.
ನಂತರ ಸೋಮವಾರ ಅವರನ್ನು ಬಿಡುಗಡೆಗೊಳಿಸಲಾಗಿದೆ. ಶಾಕಾರಿ-ಕೋಲ್ಮನ್ ನಡುವಿನ ಗಲಾಟೆ ಸೆಕ್ಯೂರಿಟಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಪೋರ್ಟ್ ಆಫ್ ಸೀಟಲ್ ಪೊಲೀಸರು ಕ್ರಮ ತೆಗೆದುಕೊಂಡರು. ಆದರೆ ಈ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಲು ಕೋಲ್ಮನ್ ನಿರಾಕರಿಸಿದ್ದು, ತಾನು ಸಂತ್ರಸ್ತನಲ್ಲ ಎಂದೂ ಹೇಳಿದ್ದಾರೆ.