ಕ್ರೀಡೆ

ವರ್ಷಾಂತ್ಯಕ್ಕೆ ಒಲಿಂಪಿಕ್ಸ್ ಮುಂದೂಡಿಕೆ?; ಜುಲೈ 24ರಂದು ಆರಂಭ ಅನುಮಾನ, ಜಪಾನ್ ಸಚಿವರ ಹೇಳಿಕೆಯಿಂದ ಗೊಂದಲ

ಟೋಕಿಯೊ: ಕರೊನಾ ವೈರಸ್ ಕಾಟದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಜುಲೈ-ಆಗಸ್ಟ್​ನಲ್ಲಿ ನಡೆಯುವ ಬದಲಾಗಿ ವರ್ಷಾಂತ್ಯಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಒಲಿಂಪಿಕ್ಸ್ ರದ್ದುಗೊಳಿಸುವ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಚಿಂತನೆ ನಡೆಸಿರುವ ನಡುವೆ ಆತಿಥೇಯ ಜಪಾನ್, ವರ್ಷಾಂತ್ಯದೊಳಗೆ ಟೂರ್ನಿ ಆಯೋಜನೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಹೇಳಿದೆ.

ಗೇಮ್ಸ್​ ಆಯೋಜನೆಯ ಒಪ್ಪಂದದ ಅನ್ವಯ 2020ರೊಳಗೆ ಒಲಿಂಪಿಕ್ಸ್ ಸಂಘಟಿಸಬೇಕಿದೆ. ಇದರಿಂದ ಟೂರ್ನಿಯ ಮುಂದೂಡಿಕೆಗೂ ಒಪ್ಪಂದದಲ್ಲಿ ಅವಕಾಶವಿದೆ. 2020ರ ಅಂತ್ಯದೊಳಗೆ ಯಾವಾಗ ಬೇಕಿದ್ದರೂ ಕ್ರೀಡಾಕೂಟವನ್ನು ನಡೆಸಬಹುದಾಗಿದೆ ಎಂದು ಜಪಾನ್​ನ ಒಲಿಂಪಿಕ್ಸ್ ಸಚಿವ ಸೀಕೊ ಹಶಿಮೊಟೊ ಹೇಳಿದ್ದಾರೆ.

ಗೇಮ್ಸ್​  ಆತಿಥ್ಯ ಒಪ್ಪಂದದ ಅನ್ವಯ, ಒಲಿಂಪಿಕ್ಸ್ ರದ್ದುಗೊಳಿಸುವ ಹಕ್ಕು ಐಒಸಿಯದ್ದಾಗಿರುತ್ತದೆ. ಕರೊನಾ ಭೀತಿಯ ನಡುವೆ ಟೋಕಿಯೊದಲ್ಲೇ ಒಲಿಂಪಿಕ್ಸ್ ಆಯೋಜನೆಗೆ ಬದ್ಧವಾಗಿರುವುದಾಗಿ ಐಒಸಿ ಅಧ್ಯಕ್ಷ ಥಾಮಸ್ ಬಾಷ್ ಕಳೆದ ವಾರ ಹೇಳಿದ್ದರು.

ಆದರೆ ಜಪಾನ್ ಸಚಿವರ ಹೇಳಿಕೆಯಿಂದ ಒಲಿಂಪಿಕ್ಸ್ ಬಗ್ಗೆ ಮತ್ತೆ ಗೊಂದಲ ಮೂಡಿದೆ. ಒಲಿಂಪಿಕ್ಸ್ ಆಯೋಜನೆಗೆ ಜಪಾನ್ ನಿಗದಿಪಡಿಸಿರುವ ಬಜೆಟ್ 91.5 ಸಾವಿರ ಕೋಟಿ ರೂಪಾಯಿ (12.51 ಶತಕೋಟಿ ಡಾಲರ್). ಒಲಿಂಪಿಕ್ಸ್ ಕ್ರೀಡಾಂಗಣಗಳ ನಿರ್ವಣಕ್ಕಾಗಿ ಜಪಾನ್ 8,127 ಕೋಟಿ ರೂ. ವ್ಯಯಿಸಿದೆ. ಪ್ಯಾರಾಲಿಂಪಿಕ್ಸ್ ಆಯೋಜನೆಗೆ 2 ಸಾವಿರ ಕೋಟಿ ರೂ. ವ್ಯಯಿಸಲಿದೆ. ಜಪಾನ್ ಲೆಕ್ಕಪತ್ರ ಮಂಡಳಿಯ ಅನ್ವಯ ಸರ್ಕಾರ 2013ರಿಂದ 2018ರ ಅವಧಿಯಲ್ಲಿ ಒಲಿಂಪಿಕ್ಸ್ ಆಯೋಜನೆಗಾಗಿ 71 ಸಾವಿರ ಕೋಟಿ ರೂ. ವ್ಯಯಿಸಿದೆ. -ಏಜೆನ್ಸೀಸ್