ಕ್ರೀಡೆ

ಒಡಿಶಾ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಫೈನಲ್​ಗೇರಿದ ರಾಜ್ಯದ ಆಯುಷ್ ಶೆಟ್ಟಿ​, ಅಶ್ವಿನಿ ಪೊನ್ನಪ್ಪ

ಬೆಂಗಳೂರು: ವಿಶ್ವ ಜೂನಿಯರ್​ ಚಾಂಪಿಯನ್​ಷಿಪ್​ ಕಂಚು ವಿಜೇತ ಕರ್ನಾಟಕದ ಯುವ ಷಟ್ಲರ್​ ಆಯುಷ್​ ಶೆಟ್ಟಿ ಕಟಕ್​ನಲ್ಲಿ ನಡೆಯುತ್ತಿರುವ ಒಡಿಶಾ ಮಾಸ್ಟರ್ಸ್​ ಸೂಪರ್​-100 ಬ್ಯಾಡ್ಮಿಂಟನ್​ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಫೈನಲ್​ಗೇರಿದ್ದಾರೆ. ಮಹಿಳಾ ಡಬಲ್ಸ್​ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೋ ಜತೆಗೂಡಿ ಪ್ರಶಸ್ತಿ ಸುತ್ತಿಗೇರಿದ್ದಾರೆ.

ಉಡುಪಿಯ 18 ವರ್ಷದ ಆಯುಷ್​ ಶೆಟ್ಟಿ ಶನಿವಾರ ನಡೆದ ಸೆಮಿಫೈನಲ್​ನಲ್ಲಿ ಇಂಡೋನೇಷ್ಯಾದ ಅಲ್ವಿ ರ್ಹಾನ್​ ಎದುರು 19-21, 21-14, 22-20 ಗೇಮ್​ಗಳಿಂದ ಗೆಲುವು ಸಾಧಿಸಿದರು. ಆಯುಷ್​ ಪ್ರಶಸ್ತಿ ಸುತ್ತಿನಲ್ಲಿ ದೇಶಬಾಂಧವ ಸತೀಶ್​ ಕುಮಾರ್​ ಕರುಣಾಕರನ್​ ವಿರುದ್ಧ ಸೆಣಸಲಿದ್ದಾರೆ.

ಅಶ್ವಿನಿ-ತನಿಶಾ ಜೋಡಿ ಸೆಮೀಸ್​ನಲ್ಲಿ ಇಂಡೋನೇಷ್ಯಾದ ಅರ್ಲ್ಯಾ ನಬಿಲ ಥೀಸ ಮುಂಗರನ್​ ಮತ್ತು ಅಗ್ನಿಯಾ ಶ್ರೀ ರಹಯು ಜೋಡಿಯನ್ನು 21-17, 21-13ರಿಂದ ಸೋಲಿಸಿದರು. ಇದರೊಂದಿಗೆ ಅಶ್ವಿನಿ ಜೋಡಿ ಸತತ 3ನೇ ವಾರದ ಟೂರ್ನಿಯಲ್ಲಿ ಫೈನಲ್​ಗೇರಿದಂತಾಗಿದೆ. ಮೊದಲಿಗೆ ಲಖನೌದಲ್ಲಿ ನಡೆದ ಸಯ್ಯದ್​ ಮೋದಿ ಸೂಪರ್​-300 ಟೂರ್ನಿಯಲ್ಲಿ ರನ್ನರ್​ಅಪ್​ ಆಗಿದ್ದ ಅಶ್ವಿನಿ ಜೋಡಿ, ಕಳೆದ ವಾರ ಗುವಾಹಟಿ ಮಾಸ್ಟರ್ಸ್​ ಸೂಪರ್​-100 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು.