ನವದೆಹಲಿ: ಏಕದಿನ ಕ್ರಿಕೆಟ್ನಲ್ಲಿ 90ರ ದಶಕದಲ್ಲಿ ತ್ರಿಕೋನ ಸರಣಿಗಳು ಸಾಮಾನ್ಯವೆನಿಸಿದ್ದವು. ಈ ಟೂರ್ನಿಗಳ ಫೈನಲ್ ಲೆಕ್ಕಾಚಾರಗಳೂ ತೀವ್ರ ಕುತೂಹಲ ಕೆರಳಿಸುತ್ತಿದ್ದವು. ಆದರೆ ಟಿ20 ಕ್ರಿಕೆಟ್ ಆರಂಭಗೊಂಡ ಬಳಿಕ ಈ ತ್ರಿಕೋನ ಸರಣಿಗಳು ಕಡಿಮೆಯಾಗಿದ್ದಷ್ಟೇ ಅಲ್ಲದೆ, ಬಹುತೇಕ ನಿಂತು ಹೋಗಿದ್ದವು. ಇದೀಗ ಮುಂದಿನ ವರ್ಷದ ಏಕದಿನ ವಿಶ್ವಕಪ್ಗೆ ಪೂರ್ವಭಾವಿಯಾಗಿ ತ್ರಿಕೋನ ಸರಣಿಗಳು ಮರುಜೀವ ಪಡೆದುಕೊಂಡಿವೆ.
ಇದೀಗ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯುತ್ತಿರುವ ಎರಡು ತ್ರಿಕೋನ ಸರಣಿಗಳು, ಏಕದಿನ ವಿಶ್ವಕಪ್ ಸಿದ್ಧತೆಗೆ ವೇದಿಕೆ ಎನಿಸಿವೆ. ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಒಳಗೊಂಡ ತ್ರಿಕೋನ ಸರಣಿ ಕಳೆದ ಶನಿವಾರ ಅಬುಧಾಬಿಯಲ್ಲಿ ಆರಂಭಗೊಂಡಿದ್ದರೆ, ಆತಿಥೇಯ ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್ ಒಳಗೊಂಡ ತ್ರಿಕೋನ ಸರಣಿಗೆ ಭಾನುವಾರ ಚಾಲನೆ ಲಭಿಸಿದೆ.