ಕ್ರೀಡೆ

ಅಫ್ಘನ್​ ದಾಳಿಗೆ ತತ್ತರಿಸಿದ ಕಿವೀಸ್​; ನ್ಯೂಜಿಲೆಂಡ್​ ಎದುರು ಭರ್ಜರಿ ಜಯಗಳಿಸಿದ ರಶೀದ್​ ಪಡೆ

ಗಯಾನಾ: ಇಲ್ಲಿನ ಪ್ರಾವಿಡೆನ್ಸ್​ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ನ 14ನೇ​ ಪಂದ್ಯದಲ್ಲಿ ನ್ಯೂಜಿಲೆಂಡ್​ ಎದುರು ಅಫ್ಘಾನಿಸ್ತಾನ ತಂಡವು ಅಲ್ರೌಂಡ್​ ಪ್ರದರ್ಶನದ ಫಲವಾಗಿ ಭರ್ಜರಿ ಜಯ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನಿಸ್ತಾನ ತಂಡವು ಆರಂಭಿಕ ರಹಮಾನುಲ್ಲಾ ಗುರ್ಬಾಜ್​ (80 ರನ್, 56 ಎಸೆತ, 5 ಬೌಂಡರಿ, 5 ಸಿಕ್ಸರ್), ಇಬ್ರಾಹಿಂ ಜರ್ದಾನ್​ (44 ರನ್, 41 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 159 ರನ್​ಗಳಿಸಿತ್ತು. ನ್ಯೂಜಿಲೆಂಡ್​ ಪರ ಟ್ರೆಂಟ್​ ಬೌಲ್ಟ್​ (4-0-22-2), ಮ್ಯಾಟ್​ ಹೆನ್ರಿ (4-0-37-2), ಲಾಕಿ ಫರ್ಗ್ಯೂಸನ್​ (4-0-28-1), ಮಿಚೆಲ್​ ಸ್ಯಾಂಟ್ನರ್​ (4-0-24-0), ಮೈಕೆಲ್ ಬ್ರೇಸ್​ವೆಲ್​ (3-0-27-0), ಡೆರಿಲ್​ ಮಿಚೆಲ್​ (1-0-16-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

160 ರನ್​ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಅಫ್ಘಾನಿಸ್ಥಾನ ಬೌಲರ್​ಗಳು ಎದುರಾಳಿ ತಂಡವನ್ನು 75 ರನ್​ಗಳಿಗೆ ಆಲೌಟ್​ ಮಾಡುವ ಮೂಲಕ 84 ರನ್​ಗಳ ಭರ್ಜರಿ ಜಯ ಕಂಡಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ (9), ಡೆವೊನ್ ಕಾನ್ವೇ (8), ಫಿನ್ ಅಲೆನ್ (0), ಡೆರಿಲ್ ಮಿಚೆಲ್ (5), ಗ್ಲೆನ್ ಫಿಲಿಪ್ಸ್ (18) ಹಾಗೂ ಮಾರ್ಕ್ ಚಾಪ್‌ಮ್ಯಾನ್ (4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.

ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಖಿ (3.2-0-17-4), ನಾಯಕ ರಶೀದ್​ ಖಾನ್​ (4-0-17-4), ಮೊಹಮ್ಮದ್​ ನಬಿ (4-0-16-2), ನವೀನ್​ ಉಲ್​ ಹಕ್​ (3-0-10-0), ನೂರ್​ ಅಹಮದ್​ (1-0-10-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.