ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನ್ಯೂಜಿಲೆಂಡ್ ಆಲ್ರೌಂಡರ್ ಕೋರಿ ಆಂಡರ್‌ಸನ್ ವಿದಾಯ

ಕ್ರೈಸ್ಟ್‌ಚರ್ಚ್: ವೃತ್ತಿಜೀವನದುದ್ದಕ್ಕೂ ಹೆಚ್ಚಾಗಿ ಗಾಯದ ಸಮಸ್ಯೆಯಿಂದ ಬಳಲಿದ ನ್ಯೂಜಿಲೆಂಡ್ ಆಲ್ರೌಂಡರ್ ಕೋರಿ ಆಂಡರ್‌ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಯುಎಸ್‌ಎಯ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಜತೆಗೆ ಮೂರು ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ. 29 ವರ್ಷದ ಆಂಡರ್‌ಸನ್, 13 ಟೆಸ್ಟ್, 49 ಏಕದಿನ, ಹಾಗೂ 31 ಟಿ20 ಪಂದ್ಯಗಳನ್ನಾಡಿದ್ದರು. ಗಾಯದ ಸಮಸ್ಯೆಯಿಂದಾಗಿ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದ ಪರ ಆಡಿರಲಿಲ್ಲ. ಮೂರು ಮಾದರಿಯ 93 ಅಂತಾರಾಷ್ಟ್ರೀಯ ಪಂದ್ಯಗಳಿಂದ 2 ಶತಕ, 10 ಅರ್ಧಶತಕ ಸೇರಿದಂತೆ 2277 ರನ್ ಬಾರಿಸಿದ್ದು, 90 ವಿಕೆಟ್ ಕಬಳಿಸಿದ್ದಾರೆ.

ನ್ಯೂಜಿಲೆಂಡ್ ತಂಡ ಪ್ರತಿನಿಧಿಸುವುದೇ ಒಂದು ಗೌರವ ಎಂದು ಆಂಡರ್‌ಸನ್ ಪ್ರತಿಕ್ರಿಯಿಸಿದ್ದಾರೆ. 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ಎಸೆತಗಳಿಗೆ ಶತಕ ಸಿಡಿಸಿದ್ದರು. ಸದ್ಯ ಇದು ಅತಿವೇಗದ 2ನೇ ಶತಕವಾಗಿದೆ. 2014ರ ನೂತನ ವರ್ಷದ ದಿನ ಈ ಸಾಧನೆ ಮಾಡಿದ್ದರು. ಬಳಿಕ 2015ರಲ್ಲಿ ಎಬಿ ಡಿವಿಲಿಯರ್ಸ್‌ 31 ಎಸೆತಗಳಲ್ಲಿ ಈ ದಾಖಲೆ ಹಿಂದಿಕ್ಕಿದ್ದರು. ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಹೆಚ್ಚು ಅವಕಾಶ ದಕ್ಕಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ನಿರ್ಧರಿಸಿದ್ದೇನೆ. ಅವಕಾಶ ನೀಡಿದ ಎನ್‌ಝೆಡ್‌ಸಿಗೆ ಸದಾ ಋಣಿಯಾಗಿರುವೆ ಎಂದು ಹೇಳಿದ್ದಾರೆ.

ಆಂಡರ್‌ಸನ್ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್, ಆರ್‌ಸಿಬಿ ಪರ ಆಡಿದ್ದರು. 2015ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದಲ್ಲಿದ್ದರು. 2018ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡಿದ್ದರು. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೊಸ್ ಟ್ರೆನಿಡೆಂಟ್ಸ್ ತಂಡ ಪ್ರತಿನಿಧಿಸಿದ್ದರು.