ಸಿಡ್ನಿ: ಭಾರತ ತಂಡಕ್ಕೆ ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯಲ್ಲೂ ಅಭ್ಯಾಸ ನಡೆಸಲು ನ್ಯೂ ಸೌತ್ ವೇಲ್ಸ್ ಸರ್ಕಾರ ಅವಕಾಶ ಕಲ್ಪಿಸಿದೆ. ಇದರೊಂದಿಗೆ ಸೀಮಿತ ಓವರ್ ಸರಣಿಯ ಪಂದ್ಯಗಳು ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯುವುದು ಖಚಿತಗೊಂಡಿದೆ.
ಈ ಹಿಂದಿನ ವೇಳಾಪಟ್ಟಿ ಪ್ರಕಾರ ಭಾರತ ತಂಡ ಬ್ರಿಸ್ಬೇನ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು. ಆದರೆ ಅಲ್ಲಿ ಕ್ವಾರಂಟೈನ್ ಅವಧಿಯಲ್ಲೇ ಅಭ್ಯಾಸ ನಡೆಸಲು ಕ್ವೀನ್ಸ್‌ಲ್ಯಾಂಡ್ ಸರ್ಕಾರ ಅನುಮತಿ ನೀಡಿರಲಿಲ್ಲ. ಇದರಿಂದಾಗಿ ಕೊಹ್ಲಿ ಬಳಗ ಸಿಡ್ನಿಯಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ. ಭಾರತ ತಂಡ ನವೆಂಬರ್ 27 ಮತ್ತು 29ರಂದು ಸಿಡ್ನಿಯಲ್ಲಿ ಮೊದಲೆರಡು ಏಕದಿನ ಪಂದ್ಯಗಳನ್ನು ಆಡಲಿದ್ದರೆ, ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಡಿಸೆಂಬರ್ 1ರಂದು 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಬಳಿಕ ಕ್ಯಾನ್‌ಬೆರಾದಲ್ಲೇ ಡಿಸೆಂಬರ್ 4ರಂದು ಮೊದಲ ಟಿ20 ಪಂದ್ಯ ನಡೆಯಲಿದ್ದರೆ, ಕೊನೆಯ 2 ಟಿ20 ಪಂದ್ಯಗಳು ಡಿಸೆಂಬರ್ 6 ಮತ್ತು 8ರಂದು ಸಿಡ್ನಿಯಲ್ಲಿ ನಡೆಯಲಿವೆ.
ಟೆಸ್ಟ್ ಸರಣಿಗೆ ಅಹರ್ನಿಶಿ ಪಂದ್ಯದೊಂದಿಗೆ ಚಾಲನೆ ದೊರೆಯಲಿದ್ದು, ಡಿಸೆಂಬರ್ 17ರಿಂದ 21ರವರೆಗೆ ಅಡಿಲೇಡ್‌ನಲ್ಲಿ ಪಿಂಕ್ ಟೆಸ್ಟ್ ನಡೆಯಲಿದೆ. ಬಳಿಕ ಮೆಲ್ಬೋರ್ನ್‌ನಲ್ಲಿ ಅವಕಾಶ ಲಭಿಸದಿದ್ದರೆ, ಡಿ.26ರಿಂದ 30ರವರೆಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವೂ ಅಡಿಲೇಡ್‌ನಲ್ಲೇ ನಡೆಯಲಿದೆ. ನ್ಯೂ ಇಯರ್ ಟೆಸ್ಟ್ ಸಿಡ್ನಿಯಲ್ಲಿ ಜನವರಿ 7ರಿಂದ 11ರವರೆಗೆ ನಿಗದಿಯಾಗಿದ್ದರೆ, ಬ್ರಿಸ್ಬೇನ್‌ನಲ್ಲಿ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 15ರಿಂದ 19ರವರೆಗೆ ನಡೆಯಲಿದೆ. ಬಿಸಿಸಿಐನಿಂದ ಅಂಗೀಕಾರ ಸಿಕ್ಕ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಈ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.
ಭಾರತ ತಂಡದ ಆಸೀಸ್ ಪ್ರವಾಸ ವೇಳಾಪಟ್ಟಿ:
ದಿನಾಂಕ ಪಂದ್ಯ ಸ್ಥಳ
ನ. 27 1ನೇ ಏಕದಿನ ಸಿಡ್ನಿ
ನ. 29 2ನೇ ಏಕದಿನ ಸಿಡ್ನಿ
ಡಿ. 1 3ನೇ ಏಕದಿನ ಕ್ಯಾನ್‌ಬೆರಾ
ಡಿ. 4 1ನೇ ಟಿ20 ಕ್ಯಾನ್‌ಬೆರಾ
ಡಿ. 6 2ನೇ ಟಿ20 ಸಿಡ್ನಿ
ಡಿ. 8 3ನೇ ಟಿ20 ಸಿಡ್ನಿ
ಡಿ. 17-21 1ನೇ ಟೆಸ್ಟ್ ಅಡಿಲೇಡ್
ಡಿ. 26-30 2ನೇ ಟೆಸ್ಟ್ ಮೆಲ್ಬೋರ್ನ್/ಅಡಿಲೇಡ್
ಜ. 7-11 3ನೇ ಟೆಸ್ಟ್ ಸಿಡ್ನಿ
ಜ. 15-19 4ನೇ ಟೆಸ್ಟ್ ಬ್ರಿಸ್ಬೇನ್
ಡಬ್ಲ್ಯುಟಿಸಿ ಪಂದ್ಯಗಳ ಅಂಕ ಹಂಚಿಕೆ?
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಕರೊನಾ ಭೀತಿಯಿಂದಾಗಿ ನಡೆಯದಿರುವ ಪಂದ್ಯಗಳ ಅಂಕವನ್ನು ಉಭಯ ತಂಡಗಳಿಗೆ ಹಂಚಿಕೆ ಮಾಡಲು ಐಸಿಸಿ ಚಿಂತನೆ ನಡೆಸಿದೆ. ಈ ಮೂಲಕ ಟೂರ್ನಿಯ ಫೈನಲ್ ಪಂದ್ಯವನ್ನು ನಿಗದಿಯಂತೆಯೇ 2021ರ ಜೂನ್‌ನಲ್ಲಿ ಆಯೋಜಿಸುವುದು ಐಸಿಸಿ ಯೋಜನೆಯಾಗಿದೆ. ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಕ್ರಿಕೆಟ್ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, 2021ರ ಮಾರ್ಚ್ ಅಂತ್ಯದವರೆಗೆ ನಿಗದಿಯಾಗಿರುವ ಎಲ್ಲ ದ್ವಿಪಕ್ಷೀಯ ಟೆಸ್ಟ್ ಸರಣಿಗಳ ಅಂಕವನ್ನು ಸಮಾನವನ್ನು ಹಂಚಿಕೆ ಮಾಡುವ ಮೂಲಕ ಡಬ್ಲ್ಯುಟಿಸಿ ಅನ್ನು ನಿಗದಿಯಂತೆಯೇ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಡಬ್ಲ್ಯುಟಿಸಿ ನಿಯಮದನ್ವಯ ಪ್ರತಿ ಟೆಸ್ಟ್ ಸರಣಿಯಲ್ಲಿ 120 ಅಂಕಗಳು ಪಣಕ್ಕಿರುತ್ತವೆ. ಅಂತಿಮವಾಗಿ ತಂಡಗಳು ತಾವು ಆಡಿದ ಪಂದ್ಯಗಳಲ್ಲಿ ಕಲೆಹಾಕಿದ ಅಂಕಗಳ ಶೇಕಡವಾರು ಆಧಾರದಲ್ಲಿ ಫೈನಲ್ ಪಂದ್ಯದಲ್ಲಿ ಆಡಲಿರುವ ಅಗ್ರ 2 ತಂಡಗಳನ್ನು ನಿರ್ಧರಿಸಲು ಐಸಿಸಿ ಬಯಸಿದೆ.