ಕ್ರೀಡೆ

ಯುಎಸ್​ ಓಪನ್​ ಫೈನಲ್​ಗೇರಿದ ಜೋಕೊವಿಕ್​, ಮೆಡ್ವೆಡೇವ್​

ನ್ಯೂಯಾರ್ಕ್​: ದಾಖಲೆಯ 24ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಸೆರ್ಬಿಯಾದ ತಾರೆ ನೊವಾಕ್​ ಜೋಕೊವಿಕ್​ ಮತ್ತು ಹಾಲಿ ಚಾಂಪಿಯನ್​ ಕಾಲೋರ್ಸ್​ ಅಲ್ಕರಾಜ್​ಗೆ ಆಘಾತ ನೀಡಿರುವ ರಷ್ಯಾದ ಆಟಗಾರ ಡೆನಿಲ್​ ಮೆಡ್ವೆಡೇವ್​ ವರ್ಷದ ಕೊನೇ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಯುಎಸ್​ ಓಪನ್​ನ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಫೈನಲ್​ಗೇರಿದ್ದಾರೆ. 2021ರ ಫೈನಲಿಸ್ಟ್​ಗಳ ಮರುಮುಖಾಮುಖಿ ಇದಾಗಿದೆ.

ಎರಡನೇ ಶ್ರೇಯಾಂಕಿತ ಜೋಕೊವಿಕ್​ ಶುಕ್ರವಾರ ರಾತ್ರಿ ಆರ್ಥರ್​ ಆಶ್​ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಆತಿಥೇಯ ಅಮೆರಿಕದ ಯುವತಾರೆ ಬೆನ್​ ಶೆಲ್ಟನ್​ ವಿರುದ್ಧ 6-3, 6-2, 7-6 (7-4) ನೇರಸೆಟ್​ಗಳಿಂದ ಗೆಲುವು ದಾಖಲಿಸಿದರು. ಎರಡು ಗಂಟೆ, 41 ನಿಮಿಷಗಳ ಹೋರಾಟದಲ್ಲಿ ಜೋಕೊವಿಕ್​ ಜಯ ಒಲಿಸಿಕೊಂಡರು. ಈ ಮೂಲಕ ಯುಎಸ್​ ಓಪನ್​ನಲ್ಲಿ 10ನೇ ಬಾರಿ ಫೈನಲ್​ಗೇರಿದ ಸಾಧನೆ ಮಾಡಿದರು.

ಕರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಕಳೆದ ವರ್ಷದ ಟೂರ್ನಿ ತಪ್ಪಿಸಿಕೊಂಡಿದ್ದ 36 ವರ್ಷದ ಜೋಕೋ, ಈಗ 4ನೇ ಬಾರಿ ಇಲ್ಲಿ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದ್ದಾರೆ. ಇದಲ್ಲದೆ 2021ರ ಫೈನಲ್​ ಸೋಲಿಗೆ ಮೆಡ್ವೆಡೇವ್​ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶವೂ ಅವರ ಮುಂದಿದೆ. ಫೈನಲ್​ ಫಲಿತಾಂಶ ಏನೇ ಬಂದರೂ ಜೋಕೋ ಮುಂದಿನ ವಾರ ಮರಳಿ ವಿಶ್ವ ನಂ. 1 ಪಟ್ಟಕ್ಕೇರಲಿದ್ದಾರೆ. ಇದು ಅವರು ಮೊದಲ ಸುತ್ತು ದಾಟಿದಾಗಲೇ ಖಚಿತಗೊಂಡಿತ್ತು. ನೊವಾಕ್​ ಜೋಕೊವಿಕ್​ 3ನೇ ಬಾರಿಗೆ ವರ್ಷದ ಎಲ್ಲ 4 ಗ್ರಾಂಡ್​ ಸ್ಲಾಂ ಟೂರ್ನಿಗಳಲ್ಲಿ ಫೈನಲ್​ಗೇರಿ ರೋಜರ್ ಫೆಡರರ್​ (2006, 2007, 2009) ಸಾಧನೆ ಮಾಡಿದ್ದರು. ಈ ಮುನ್ನ 2015 ಮತ್ತು 2021ರಲ್ಲೂ ಇದನ್ನು ಸಾಧಿಸಿದ್ದರು.

ಯುಎಸ್​ ಓಪನ್​ನಲ್ಲಿ 10ನೇ ಬಾರಿಗೆ ಫೈನಲ್​ಗೇರಿದ ಜೋಕೊವಿಕ್​, 2 ಗ್ರಾಂಡ್​ ಸ್ಲಾಂಗಳಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿದರು. ಆಸ್ಟ್ರೆಲಿಯನ್​ ಓಪನ್​ನಲ್ಲೂ ಅವರು 10 ಬಾರಿ ಫೈನಲ್​ಗೇರಿದ್ದಾರೆ. ಜೋಕೊವಿಕ್​ ಯುಎಸ್​ ಓಪನ್​ನಲ್ಲಿ 100 ಪಂದ್ಯ ಆಡಿದ 3ನೇ ಆಟಗಾರ ಎನಿಸಿದರು. ಜಿಮ್ಮಿ ಕಾನರ್ಸ್​ (115) ಮತ್ತು ರೋಜರ್​ ಫೆಡರರ್​ (103) ಮೊದಲಿಬ್ಬರು.

ಅಲ್ಕರಾಜ್​ಗೆ ಮೆಡ್ವೆಡೇವ್​ ಶಾಕ್​

ಸತತ 2ನೇ ಬಾರಿ ಯುಎಸ್​ ಓಪನ್​ ಮತ್ತು ವರ್ಷದ ಸತತ 2ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದ ಅಗ್ರ ಶ್ರೇಯಾಂಕಿತ ಅಲ್ಕರಾಜ್​, 3ನೇ ಶ್ರೇಯಾಂಕಿತ ಮೆಡ್ವೆಡೇವ್​ ಎದುರು 6-7 (3-7), 1-6, 6-3, 3-6ರಿಂದ ಪರಾಭವಗೊಂಡರು. 3 ಗಂಟೆ 19 ನಿಮಿಷಗಳ ಹೋರಾಟದಲ್ಲಿ ಸ್ಪೇನ್​ನ 20 ವರ್ಷದ ಆಟಗಾರ ಅಲ್ಕರಾಜ್​ ಶರಣಾದರು. 2021ರಲ್ಲಿ ಯುಎಸ್​ ಓಪನ್​ನಲ್ಲೇ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಒಲಿಸಿಕೊಂಡಿದ್ದ 27 ವರ್ಷದ ಮೆಡ್ವೆಡೇವ್​ ಇದೀಗ ಅದನ್ನು 2ಕ್ಕೆ ವಿಸ್ತರಿಸುವ ಹಂಬಲದಲ್ಲಿದ್ದಾರೆ. 5ನೇ ಬಾರಿಗೆ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ಗೇರಿದ ಮೆಡ್ವೆಡೇವ್​, ಗರಿಷ್ಠ ಬಾರಿ ಗ್ರಾಂಡ್​ ಸ್ಲಾಂ ಫೈನಲ್​ಗೇರಿದ ರಷ್ಯಾ ಆಟಗಾರ ಎನಿಸಿದ್ದ ಮರಾಟ್​ ಸಫಿನ್​ (4) ದಾಖಲೆ ಮುರಿದರು.