ಪ್ಯಾರಿಸ್: ವೃತ್ತಿಪರ ಟೆನಿಸ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕೆಳ ರ್ಯಾಂಕ್ನ ಆಟಗಾರರಿಗೆ ನೆರವು ನೀಡಲು ಸ್ಟಾರ್ ಆಟಗಾರರಾದ ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೋಕೊವಿಕ್ ಮುಂದೆ ಬಂದಿದ್ದಾರೆ. ಪುರುಷರ ಟೆನಿಸ್ ಆಡಳಿತ ಸಂಸ್ಥೆ ಎಟಿಪಿ ಮತ್ತು ವರ್ಷದ 4 ಗ್ರಾಂಡ್ ಸ್ಲಾಂ ಟೆನಿಸ್ ಸಂಘಟಕರ ಜತೆಗೂಡಿ ಈ ಆಟಗಾರರ ನೆರವಿಗಾಗಿ ದತ್ತಿನಿಧಿಯೊಂದನ್ನು ಆರಂಭಿಸಲು ‘ಬಿಗ್ 3’ ಆಟಗಾರರು ಯೋಜನೆ ರೂಪಿಸಿದ್ದಾರೆ.
ಫೆಡರರ್, ನಡಾಲ್, ಜೋಕೊವಿಕ್ ಜತೆಗೆ 3 ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ಇನ್ಸ್ಟಾಗ್ರಾಂ ಲೈವ್ ಮೂಲಕ ಚರ್ಚೆ ನಡೆಸಿದ್ದು, 23ರಿಂದ 34 ಕೋಟಿ ರೂ.ವರೆಗೆ ದೇಣಿಗೆ ನೀಡುವ ಚಿಂತನೆಯಲ್ಲಿದ್ದಾರೆ. ಪ್ರಮುಖವಾಗಿ 200 ಅಥವಾ 250ರಿಂದ 700ನೇ ರ್ಯಾಂಕ್ ವರೆಗಿನ ಆಟಗಾರರಿಗೆ ನೆರವಾಗುವ ಯೋಜನೆ ಹಾಕಿಕೊಂಡಿದ್ದಾರೆ. ವೃತ್ತಿಪರ ಟೆನಿಸ್ ಚಟುವಟಿಕೆಯನ್ನು ಸದ್ಯ ಜುಲೈ ಮಧ್ಯಭಾಗದವರೆಗೂ ಸ್ಥಗಿತಗೊಳಿಸಲಾಗಿದೆ.
ದೇಶೀಯ ಆಟಗಾರರ ನೆರವಿಗೆ ಎಐಟಿಎ ಯೋಜನೆ: ಕರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ದೇಶೀಯ ಟೆನಿಸ್ ಆಟಗಾರರಿಗೆ ನೆರವಾಗುವ ಸಲುವಾಗಿ ಅಖಿಲ ಭಾರತ ಟೆನಿಸ್ ಸಂಸ್ಥೆಯೂ (ಎಐಟಿಎ) ಯೋಜನೆಯೊಂದನ್ನು ರೂಪಿಸಿದೆ. ಜುಲೈ ಅಥವಾ ಆಗಸ್ಟ್ ನಂತರದಲ್ಲಿ ಎಲ್ಲ ವಯೋಮಿತಿ ಟೂರ್ನಿಗಳನ್ನು ನಡೆಸುವ ಮೂಲಕ ಎಐಟಿಎ, ಆಟಗಾರರಿಗೆ ಆರ್ಥಿಕ ಬಲ ಒದಗಿಸಲು ಬಯಸಿದೆ. -ಪಿಟಿಐ