ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಭಾರತೀಯರೆಲ್ಲರ ಹೃದಯ ಗೆದ್ದಿದ್ದಾರೆ. ಅವರ ಸಾಧನೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಇದರ ನಡುವೆ ಅವರು ಬರೀ ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆಯ ತರುಣಿಯರ ನಿದ್ದೆಗೆಡಿಸಿದ್ದಾರೆ ಎಂದು ಬಾಲಿವುಡ್ ನಟಿ ಕಿಯಾರಾ ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ಶೇರ್‌ಷಾ’ ಪ್ರಚಾರದಲ್ಲಿ ತೊಡಗಿಕೊಂಡಿರುವ ಕಿಯಾರಾ ಆಡ್ವಾಣಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಕಿಯಾರಾ ಆಡ್ವಾಣಿ, ‘ನೀರಜ್ ಚೋಪ್ರಾ ಈಗ ಬರೀ ನ್ಯಾಷನಲ್ ಕ್ರಶ್ ಮಾತ್ರವಲ್ಲ, ವರ್ಲ್ಡ್ ಕ್ರಶ್ ಆಗಿದ್ದಾರೆ’ ಎಂದುತ್ತರಿಸಿದರು.
ಪಾಣಿಪತ್ ಮೂಲದ 23 ವರ್ಷದ ನೀರಜ್ ಚೋಪ್ರಾ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪದಕ ಅಥವಾ ಚಿನ್ನ ಜಯಿಸಿದ ಮೊದಲ ಭಾರತೀಯರಾಗಿದ್ದು, ಟೋಕಿಯೊದಲ್ಲಿ ಭಾರತದ ಪದಕ ಸಾಧನೆಗೆ ಕಳಶಪ್ರಾಯ ನಿರ್ವಹಣೆ ತೋರಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೀರಜ್ ಚೋಪ್ರಾ ಅವರ ಹಿಂಬಾಲಕರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ಒಲಿಂಪಿಕ್ಸ್‌ಗೆ ಮುನ್ನ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ ಹಿಂಬಾಲಕರನ್ನು ಹೊಂದಿದ್ದ ನೀರಜ್ ಈಗ 37 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಈ ಪೈಕಿ ಹುಡುಗಿಯರೇ ಹೆಚ್ಚಾಗಿದ್ದಾರೆ ಎನ್ನಲಾಗಿದೆ.