ಕ್ರೀಡೆ

ಟಿ20-ಟೆಸ್ಟ್​ಗೆ ಎರಡೂವರೆ ತಿಂಗಳು ರಜೆ; ಇನ್ನು ಬರೀ ಒನ್​ಡೇ ಮ್ಯಾಚು ಕಣೋ!

ಬೆಂಗಳೂರು: ಏಕದಿನ ಕ್ರಿಕೆಟ್​ ವಿಶ್ವಕಪ್​ಗೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಎಲ್ಲ ತಂಡಗಳು ಟಿ20, ಟೆಸ್ಟ್​ ಕ್ರಿಕೆಟ್​ಗಳನ್ನು ಮರೆತುಬಿಟ್ಟಿವೆ. ಇನ್ನು ಎರಡೂವರೆ ತಿಂಗಳು ಬರೀ ಏಕದಿನ ಕ್ರಿಕೆಟ್​ ಜ್ವರ. ವಿಶ್ವಕಪ್​ಗೆ ಪೂರ್ವಸಿದ್ಧತೆಯಾಗಿ ಈಗ ಏಷ್ಯಾಕಪ್​, ಇಂಗ್ಲೆಂಡ್​-ನ್ಯೂಜಿಲೆಂಡ್​ ನಡುವೆ 4 ಏಕದಿನ ಪಂದ್ಯಗಳ ಸರಣಿ, ದಕ್ಷಿಣ ಆಫ್ರಿಕಾ-ಆಸ್ಟ್ರೆಲಿಯಾ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ.

ನಂತರ ಸೆ.20ರಿಂದ ಇಂಗ್ಲೆಂಡ್​-ಐರ್ಲೆಂಡ್​ ನಡುವೆ 3 ಪಂದ್ಯಗಳ ಏಕದಿನ ಸರಣಿ, ಸೆ.21ರಿಂದ ಬಾಂಗ್ಲಾ-ನ್ಯೂಜಿಲೆಂಡ್​ ನಡುವೆ 3 ಪಂದ್ಯಗಳ ಏಕದಿನ ಸರಣಿ, ಸೆ. 22ರಿಂದ ಭಾರತ-ಆಸೀಸ್​ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ವಿಶ್ವಕಪ್​ಗೆ ಮುನ್ನ 10 ಅಭ್ಯಾಸ ಪಂದ್ಯಗಳು ನಡೆಯಲಿದ್ದರೂ, ಇವುಗಳಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಮಾನ್ಯತೆ ಇರುವುದಿಲ್ಲ. ಯಾಕೆಂದರೆ ಇದರಲ್ಲಿ ಎಲ್ಲ 15 ಆಟಗಾರರನ್ನು ಆಡಿಸಬಹುದು. ಅಕ್ಟೋಬರ್​ 5ರಿಂದ ನವೆಂಬರ್​ 19ರವರೆಗೆ ವಿಶ್ವಕಪ್​ನಲ್ಲಿ 48 ಏಕದಿನ ಪಂದ್ಯಗಳು ನಡೆಯಲಿವೆ.

ಮುಂದಿನ ಟೆಸ್ಟ್​ ಪಂದ್ಯವಿನ್ನು ನವೆಂಬರ್​ 28ರಿಂದ ಬಾಂಗ್ಲಾ-ನ್ಯೂಜಿಲೆಂಡ್​ ನಡುವೆ ನಡೆಯಲಿದೆ. ಮುಂದಿನ ಟಿ20 ಪಂದ್ಯ, ವಿಶ್ವಕಪ್​ ಮುಗಿದ 4 ದಿನಗಳ ಬಳಿಕ ನವೆಂಬರ್​ 23ರಂದು ಭಾರತ-ಆಸೀಸ್​ ನಡುವೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.