ನವದೆಹಲಿ: ಕಳೆದ 4 ತಿಂಗಳ ಅವಧಿಯಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಟೀಮ್ ಇಂಡಿಯಾ ಇನ್ನು ಸೀಮಿತ ಓವರ್ ಕ್ರಿಕೆಟ್ನತ್ತ ಗಮನ ಕೇಂದ್ರೀಕರಿಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಉತ್ತಮ ಪೂರ್ವ ಸಿದ್ಧತೆ ನಡೆಸುವುದು ಈ ಪೈಕಿ ಪ್ರಮುಖವೆನಿಸಿದೆ. ಹೀಗಾಗಿ ಭಾರತ ತಂಡ ಫೆಬ್ರವರಿ 6ರಿಂದ 12ರವರೆಗೆ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಹುತೇಕ ತಂಡವನ್ನೇ ಕಣಕ್ಕಿಳಿಸಲಿದ್ದು, ವೇಗಿ ಜಸ್ಪ್ರೀತ್ ಬುಮ್ರಾಗೆ ಮಾತ್ರ ವಿನಾಯಿತಿ ಸಿಗಲಿದೆ ಎನ್ನಲಾಗಿದೆ. ಇದರಿಂದಾಗಿ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸಹಿತ ಬೇರಾವುದೇ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದಿಲ್ಲ. ಶ್ರೇಯಸ್ ಅಯ್ಯರ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಕೂಡ ಭಾರತ ತಂಡದ ಪರ ಮರಳಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ 2023ರ ತವರಿನ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ಅ.19ರಂದು ಪುಣೆಯಲ್ಲಿ ಆಡಿದ ಬಳಿಕ ಭಾರತ ಪರ ಯಾವುದೇ ಏಕದಿನ ಪಂದ್ಯ ಆಡಿಲ್ಲ. ನಂತರದಲ್ಲಿ ಭಾರತ ಪರ ಟಿ20 ಪಂದ್ಯಗಳನ್ನಷ್ಟೇ ಆಡುತ್ತ ಬಂದಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಆಡಿ ಏಕದಿನ ಕ್ರಿಕೆಟ್ಗೆ ಫಿಟ್ ಆಗಿರುವುದಾಗಿ ಹಾರ್ದಿಕ್ ನಿರೂಪಿಸಿದ್ದಾರೆ. ಇನ್ನೂ ಶ್ರೇಯಸ್ ಅಯ್ಯರ್ ಕೂಡ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ 5 ಪಂದ್ಯ ಆಡಿ 2 ಶತಕ ಸಿಡಿಸಿದ್ದರು. ಹೀಗಾಗಿ ಅವರೂ ಉತ್ತಮ ಲಯದಲ್ಲಿರುವುದು ಸ್ಪಷ್ಟವಾಗಿದೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಮುನ್ನ ಜನವರಿ 22ರಿಂದ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ಸಾರಥ್ಯದ ಚುಟುಕು ಕ್ರಿಕೆಟ್ ತಂಡದಲ್ಲಿ ಬಹುತೇಕ ಯುವ ಆಟಗಾರರೇ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಳೆದ ವರ್ಷ ಟಿ20 ವಿಶ್ವಕಪ್ ನಂತರ ಬಾಂಗ್ಲಾ, ದ. ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಕಾಣಿಸಿಕೊಂಡ ಐಪಿಎಲ್ ತಾರೆಯರೇ ಮತ್ತೆ ಅವಕಾಶ ಪಡೆಯಬಹುದು ಎನ್ನಲಾಗಿದೆ.
ಸಂಭಾವ್ಯ ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಅಕ್ಷರ್ ಪಟೇಲ್/ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್.
ಚಾಂಪಿಯನ್ಸ್ ತಂಡ ಆಯ್ಕೆಗೆ 12ರ ಗಡುವು
ಫೆ..19ರಿಂದ ಪಾಕಿಸ್ತಾನ-ಯುಎಇಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ 15 ಆಟಗಾರರ ತಂಡಗಳ ತಾತ್ಕಾಲಿಕ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಲು ಜನವರಿ 12 ಅಂತಿಮ ದಿನಾಂಕವಾಗಿದೆ. ಆದರೆ ಫೆ. 13ರವರೆಗೆ ಈ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ನಂತರ ಬದಲಾವಣೆ ಮಾಡಬೇಕಾದರೆ ಟೂರ್ನಿಯ ತಾಂತ್ರಿಕ ಸಮಿತಿಯ ಅನುಮತಿ ಪಡೆಯಬೇಕಾಗುತ್ತದೆ. ಇನ್ನು ಜ.12ಕ್ಕೆ ಮುನ್ನ ಆರಿಸಿದ ತಾತ್ಕಾಲಿಕ ತಂಡವನ್ನು ಬಹಿರಂಗಪಡಿಸುವುದು ಅಥವಾ ಗೌಪ್ಯವಾಗಿಡುವುದು ಆಯಾ ದೇಶದ ಕ್ರಿಕೆಟ್ ಮಂಡಳಿಗಳಿಗೆ ಬಿಟ್ಟ ವಿಚಾರವಾಗಿರುತ್ತದೆ. ಇಂಗ್ಲೆಂಡ್ ಮಾತ್ರ ಈಗಾಗಲೆ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಿದೆ.