ಕ್ರೀಡೆ

ಐಪಿಎಲ್​ ಮೆಗಾ ಹರಾಜಿಗೆ ಶಾರುಖ್, ಕಾವ್ಯಾ ವಿರೋಧ! ಎಸ್​ಆರ್​ಎಚ್​ ಒಡತಿ ಕೊಟ್ಟ ಕಾರಣ ಹೀಗಿದೆ…

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​)​ ಮೆಗಾ ಹರಾಜಿಗೆ ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಈ ಮೆಗಾ ಹರಾಜಿಗೆ ಕೋಲ್ಕತ್ತ ನೈಟ್​ ರೈಡರ್ಸ್​ (ಕೆಕೆಆರ್​) ತಂಡದ ಮಾಲೀಕ ಹಾಗೂ ಬಾಲಿವುಡ್​ ನಟ ಶಾರುಖ್​ ಖಾನ್​ ವಿರೋಧ ವ್ಯಕ್ತಪಡಿಸಿದ್ದು, ಸನ್​ರೈಸರ್ಸ್​ ಹೈದರಾಬಾದ್​ (ಎಸ್​ಆರ್​ಎಚ್​) ತಂಡದ ಮಾಲಕಿ ಕಾವ್ಯಾ ಮಾರನ್​ ಕೂಡ ಶಾರುಖ್​ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಮುಂಬೈನ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ನಡೆದ ಐಪಿಎಲ್​ ಮಾಲೀಕರ ಸಭೆಯಲ್ಲಿ ಶಾರುಖ್​ ಖಾನ್​ ಮೆಗಾ ಹರಾಜಿಗೆ ವಿರೋಧ ವ್ಯಕ್ತಪಡಿಸಿದ್ದಾರೆಂದು ಕ್ರಿಕ್​ಬುಕ್​ ವರದಿ ಮಾಡಿದೆ. ಮೆಗಾ ಹರಾಜು ಬದಲು ಸಣ್ಣ ಮಟ್ಟದ ಹರಾಜು ನಡೆಯಲಿ ಎಂದು ಬಿಸಿಸಿಐ ಬಳಿ ಶಾರುಖ್​ ಕೇಳಿದಾಗ, ಪಂಜಾಬ್​ ಕಿಂಗ್ಸ್​ ಸಹ ಮಾಲೀಕ ನೆಸ್​ ವಾಡಿಯ ಮಧ್ಯಪ್ರವೇಶಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಶಾರುಖ್​ ಮತ್ತು ವಾಡಿಯ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.

ಶಾರುಖ್​ ಖಾನ್​ ವಾದಕ್ಕೆ ಎಸ್​ಆರ್​ಎಚ್​ ಮಾಲಕಿ ಕಾವ್ಯಾ ಮಾರನ್​ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಸಭೆಯ ನಂತರ ಕ್ರಿಕ್‌ಬಜ್‌ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಾವ್ಯಾ ಮಾರನ್ ಐಪಿಎಲ್ ಮೆಗಾ ಹರಾಜು ನಡೆಸುವ ವಿರುದ್ಧ ಮಾತನಾಡಿದರು. ಒಂದು ತಂಡವನ್ನು ಕಟ್ಟಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಕಿರಿಯ ಆಟಗಾರರು ತಯಾರಾಗಲು ಸ್ವಲ್ಪ ಸಮಯ ಮತ್ತು ಹೂಡಿಕೆಯನ್ನು ತೆಗೆದುಕೊಳ್ಳುತ್ತದೆ. ನಮ್ಮ ತಂಡದ ಅಭಿಷೇಕ್​ ಶರ್ಮ ಅವರು ಸ್ಥಿರ ಪ್ರದರ್ಶನ ನೀಡಲು ಮೂರು ವರ್ಷ ಸಮಯ ತೆಗೆದುಕೊಳ್ಳಬೇಕಾಯಿತು. ಇತರ ತಂಡಗಳಲ್ಲಿಯೂ ಇಂತಹ ಅನೇಕ ಉದಾಹರಣೆಗಳಿವೆ ಎಂದು ಕಾವ್ಯಾ ಹೇಳಿದರು.

ಕಳೆದ ಐಪಿಎಲ್​ನಲ್ಲಿ ಅಂದರೆ 17ನೇ ಆವೃತ್ತಿಯಲ್ಲಿ ಕೋಲ್ಕತ ನೈಟ್​ ರೈಡರ್ಸ್​ ತಂಡ ಚಾಂಪಿಯನ್​ ಆಯಿತು. ಸನ್​ ರೈಸರ್ಸ್​ ಹೈದರಾಬಾದ್​ ತಂಡ ರನ್ನರ್​ ಅಪ್​ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಎರಡು ತಂಡದ ಮಾಲೀಕರು ಮೆಗಾ ಹರಾಜಿಗೆ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಉಳಿದ ತಂಡಗಳು ಮೆಗಾ ಹರಾಜಿನ ಕಡೆ ಒಲವು ಹೊಂದಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

ಅಂದಹಾಗೆ ಬಿಸಿಸಿಐ ಬುಧವಾರ ಸಂಜೆ ಎಲ್ಲ ಐಪಿಎಲ್​ ಫ್ರಾಂಚೈಸಿ ಮಾಲೀಕರ ಸಭೆಯನ್ನು ಮುಂಬೈನ ಮುಖ್ಯ ಕಚೇರಿಯಲ್ಲಿ ಕರೆದಿತ್ತು. ಈ ವೇಳೆ ಮೆಹಾ ಹರಾಜು, ಆಟಗಾರರನ್ನು ಉಳಿಸಿಕೊಳ್ಳುವುದು ಮತ್ತು ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ವೇಳೆ ಚರ್ಚಿಸಲಾಗಿದೆ. ಫ್ರಾಂಚೈಸ್ ಮಾಲೀಕರು ಆಟಗಾರರ ನಿಯಮಗಳು, ವ್ಯಾಪಾರೀಕರಣ, ಲೈಸೆನ್ಸ್​ ಮತ್ತು ಗೇಮಿಂಗ್ ಸೇರಿದಂತೆ ಇತರ ವಾಣಿಜ್ಯ ಅಂಶಗಳ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆಂದು ತಿಳಿದುಬಂದಿದೆ.

ಐಪಿಎಲ್ ಆಟಗಾರರ ನಿಯಮಗಳನ್ನು ರೂಪಿಸುವ ಮೊದಲು ಬಿಸಿಸಿಐ ಈ ಶಿಫಾರಸುಗಳನ್ನು ಐಪಿಎಲ್ ಆಡಳಿತ ಮಂಡಳಿಗೆ ಹೆಚ್ಚಿನ ಚರ್ಚೆ ಮತ್ತು ಮೌಲ್ಯಮಾಪನಕ್ಕಾಗಿ ತೆಗೆದುಕೊಳ್ಳುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಷಾ ಹೇಳಿದ್ದಾರೆ. (ಏಜೆನ್ಸೀಸ್​)