ದುಬೈ: ಪಾಕಿಸ್ತಾನ ಆತಿಥ್ಯದ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ಭಾರತದ ಯಾವುದೇ ಅಂಪೈರ್ ಅಥವಾ ಮ್ಯಾಚ್ ರೆಫ್ರಿ ಆಯ್ಕೆಯಾಗಿಲ್ಲ. ಐಸಿಸಿ ಎಲೈಟ್ ಪ್ಯಾನೆಲ್ನಲ್ಲಿರುವ ಭಾರತೀಯ ಅಂಪೈರ್ ನಿತಿನ್ ಮೆನನ್ ವೈಯಕ್ತಿಕ ಕಾರಣ ನೀಡಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವುದರಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಟೂರ್ನಿಗೆ ಒಟ್ಟು 12 ಅಂಪೈರ್ಗಳ ಪಟ್ಟಿಯನ್ನು ಐಸಿಸಿ ಬುಧವಾರ ಬಿಡುಗಡೆಗೊಳಿಸಿದೆ. ಟೀಮ್ ಇಂಡಿಯಾ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಟೂರ್ನಿಯ ಮ್ಯಾಚ್ ರೆಫ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇತ್ತೀಚೆಗೆ ನಿರಂತರವಾಗಿ ಕಾರ್ಯನಿರ್ವಹಿಸಿದ್ದರಿಂದ ಶ್ರೀನಾಥ್ ವಿಶ್ರಾಂತಿ ಬಯಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆಸ್ಟ್ರೆಲಿಯಾದ ಡೇವಿಡ್ ಬೂನ್, ಶ್ರೀಲಂಕಾದ ರಂಜನ್ ಮದುಗಲೆ ಮತ್ತು ಜಿಂಬಾಬ್ವೆಯ ಆಂಡ್ರೋ ಪೈಕ್ರಾಫ್ಟ್ ಟೂರ್ನಿಗೆ ಮೂವರು ಮ್ಯಾಚ್ ರೆಫ್ರಿಗಳಾಗಿದ್ದಾರೆ.
ಬುಮ್ರಾ ಇಲ್ಲದಿದ್ದರೆ ಭಾರತದ ಚಾನ್ಸ್ ಶೇ. 30-35 ಇಳಿಕೆ!
ವೇಗಿ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾದರೆ, ಭಾರತ ತಂಡ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಶೇ. 30-35ರಷ್ಟು ಇಳಿಕೆಯಾಗಲಿದೆ. ಬುಮ್ರಾ ಇದ್ದರೆ ಸ್ಲಾಗ್ ಓವರ್ಗಳಲ್ಲಿ ರನ್ ನಿಯಂತ್ರಣದ ಭರವಸೆ ಇರುತ್ತದೆ. ಆದರೆ ಅವರಿಲ್ಲದಿದ್ದರೆ ಪಂದ್ಯ ಸಂಪೂರ್ಣ ಭಿನ್ನವೆನಿಸುತ್ತದೆ ಎಂದು ಮಾಜಿ ಕೋಚ್ ಹಾಗೂ ವೀಕ್ಷಕವಿವರಣೆಕಾರ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಶಿಬಿರದಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಅವರ ಫಿಟ್ನೆಸ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ಈ ವಾರ ಸ್ಪಷ್ಟ ಮಾಹಿತಿ ನೀಡುವ ನಿರೀಕ್ಷೆ ಇದೆ.