ಕ್ರೀಡೆ

ಐಸಿಸಿ ಏಕದಿನ ರ‍್ಯಾಕಿಂಗ್​ನಲ್ಲಿ ನಂ. 1 ಪಟ್ಟದ ಸನಿಹ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ

ಬೆಂಗಳೂರು: ಭಾರತ ತಂಡದ ನಾಯಕ ರೋಹಿತ್​ ಶರ್ಮ ಐಸಿಸಿ ಏಕದಿನ ಬ್ಯಾಟಿಂಗ್​ ರ‍್ಯಾಕಿಂಗ್​ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಶುಭಮಾನ್​ ಗಿಲ್​ ಅವರನ್ನು ಹಿಂದಿಕ್ಕಿ, ಏಕದಿನ ಕ್ರಿಕೆಟ್​ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್​ ಎನಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ 0-2 ಅಂತರದ ಸೋಲಿನ ನಡುವೆ 3 ಪಂದ್ಯಗಳಲ್ಲಿ ಒಟ್ಟು 157 ರನ್​ ಗಳಿಸಿದ್ದ ರೋಹಿತ್​ ಶರ್ಮ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಶುಭಮಾನ್​ ಗಿಲ್​ ಒಂದು ಸ್ಥಾನ ಕುಸಿದು 3ನೇ ಸ್ಥಾನಕ್ಕಿಳಿದಿದ್ದಾರೆ. ವಿರಾಟ್​ ಕೊಹ್ಲಿ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಮ್​ 824 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ರೋಹಿತ್​ ಶರ್ಮ 765 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಶ್ರೇಯಸ್​ ಅಯ್ಯರ್​ (16) ಅಗ್ರ 20ರೊಳಗಿರುವ ಮತ್ತೋರ್ವ ಭಾರತೀಯರಾಗಿದ್ದರೆ, ಕನ್ನಡಿಗ ಕೆಎಲ್​ ರಾಹುಲ್​ 21ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್​ ರ‍್ಯಾಕಿಂಗ್​​ನಲ್ಲಿ ಸ್ಪಿನ್ನರ್​ ಕುಲದೀಪ್​ ಯಾದವ್​ 4ನೇ ಸ್ಥಾನ ಕಾಯ್ದುಕೊಂಡಿದ್ದು, ಭಾರತದ ಅಗ್ರ ಶ್ರೇಯಾಂಕಿತ ಬೌಲರ್​ ಆಗಿ ಮುಂದುವರಿದಿದ್ದಾರೆ. ದಣ ಆಫ್ರಿಕಾದ ಕೇಶವ್​ ಮಹಾರಾಜ್​ ವಿಶ್ವ ನಂ. 1 ಬೌಲರ್​ ಆಗಿದ್ದು, ಆಸ್ಟ್ರೆಲಿಯಾದ ಜೋಶ್​ ಹ್ಯಾಸಲ್​ವುಡ್​ ಮತ್ತು ಆಡಂ ಜಂಪಾ ನಂತರದ 2 ಸ್ಥಾನದಲ್ಲಿದ್ದಾರೆ. ಜಸ್​ಪ್ರೀತ್​ ಬುಮ್ರಾ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮೊಹಮದ್​ ಸಿರಾಜ್​ 5 ಸ್ಥಾನ ಕುಸಿದು, ನ್ಯೂಜಿಲೆಂಡ್​ನ ಟ್ರೆಂಟ್​ ಬೌಲ್ಟ್​ ಜತೆ ಜಂಟಿ 9ನೇ ಸ್ಥಾನದಲ್ಲಿದ್ದಾರೆ. ಮೊಹಮದ್​ ಶಮಿ 12ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಭಾರತ ಪರ ಗರಿಷ್ಠ 5 ವಿಕೆಟ್​ ಕಬಳಿಸಿದ ವಾಷಿಂಗ್ಟನ್​ ಸುಂದರ್​ 10 ಸ್ಥಾನ ಮೇಲೇರಿ 87ನೇ ಸ್ಥಾನದಲ್ಲಿದ್ದಾರೆ.

ಆಲ್ರೌಂಡರ್​ಗಳಲ್ಲಿ ರವೀಂದ್ರ ಜಡೇಜಾ 16ನೇ ಸ್ಥಾನದಲ್ಲಿದ್ದು, ಅವರೇ ಭಾರತದ ನಂ. 1 ಆಲ್ರೌಂಡರ್​ ಎನಿಸಿದ್ದಾರೆ. ಹಾರ್ದಿಕ್​ ಪಾಂಡ್ಯ 26ನೇ ಸ್ಥಾನದಲ್ಲಿದ್ದಾರೆ. ಲಂಕಾ ವಿರುದ್ಧ ಸರಣಿ ಸೋಲಿ ನಡುವೆ ಭಾರತ 118 ಅಂಕಗಳೊಂದಿಗೆ ತಂಡ ರ‍್ಯಾಕಿಂಗ್​​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಆಸ್ಟ್ರೆಲಿಯಾ (116) ಮತ್ತು ದ. ಆಫ್ರಿಕಾ (112) ನಂತರದ 2 ಸ್ಥಾನದಲ್ಲಿವೆ.