IND vs PAK: ಇತ್ತೀಚೆಗಷ್ಟೇ ದುಬೈನಲ್ಲಿ ಮುಕ್ತಾಯಗೊಂಡ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಪುರುಷರ ತಂಡ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಂಡಿದ್ದು, ಪಾಕಿಸ್ತಾನ ಮತ್ತು ಟೀಮ್ ಇಂಡಿಯಾ ತಂಡಗಳು ಇಂದು ಮುಖಾಮುಖಿಯಾಗಿವೆ. ಆದರೆ, ಇಲ್ಲಿಯೂ ಹಸ್ತಲಾಘವ ಮಾಡದೆ ಮುಂದೋಗುವ ನೀತಿ ಮುಂದುವರಿದಿದೆ.
ಇಂದು ಕೊಲೊಂಬೊದ ಆರ್. ಪ್ರೇಮಾದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಾಸ್ಗೆ ಎರಡೂ ತಂಡಗಳ ನಾಯಕಿಯರನ್ನು ಕರೆಯಲಾಯಿತು. ಈ ವೇಳೆ ಟಾಸ್ ಗೆದ್ದ ಬಳಿಕ ಪಾಕ್ ಕ್ಯಾಪ್ಟನ್ ಫಾತೀಮಾ ಸನಾಗೆ ಹಸ್ತಲಾಘವ ಮಾಡಲು ನಿರಾಕರಿಸಿದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್, ಏಷ್ಯಾಕಪ್ನಲ್ಲಿ ಸೂರ್ಯಕುಮಾರ್ ಯಾದವ್ ತೆಗೆದುಕೊಂಡ ನಿರ್ಧಾರವನ್ನೇ ಇಲ್ಲಿಯೂ ಅನುಸರಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಪಾಕ್ ಕೃತ್ಯವನ್ನು ಖಂಡಿಸಿದ ಟೀಮ್ ಇಂಡಿಯಾ, ಪಾಕ್ ತಂಡದ ಆಟಗಾರರೊಂದಿಗೆ ಕೈಕುಲುಕಲು ಇಚ್ಛಿಸಲಿಲ್ಲ. ಈ ನಿರ್ಧಾರವನ್ನು ಸೂರ್ಯಕುಮಾರ್ ಯಾದವ್ ಪಡೆ, ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಿಂದ ಫೈನಲ್ ಪಂದ್ಯದವರೆಗೂ ಅದೇ ರೀತಿ ಮುಂದುವರಿಸಿತು. ಆಡಿದ ಮೂರು ಪಂದ್ಯದಲ್ಲಿಯೂ ಪಾಕ್ ಕ್ಯಾಪ್ಟನ್ ಅಥವಾ ಆಟಗಾರರಿಗೆ ಹಸ್ತಲಾಘವ ಮಾಡಲಿಲ್ಲ. ಈ ಮೂಲಕ ಪಾಕ್ಗೆ ಭಾರೀ ಮುಖಭಂಗ ಉಂಟುಮಾಡಿತು. ಇದೀಗ ಅದೇ ಹಾದಿಯನ್ನು ಅನುಸರಿಸಿರುವ ಭಾರತ ಮಹಿಳಾ ತಂಡದ ನಾಯಕಿ, ಇಂದಿನ ವಿಶ್ವಕಪ್ ಪಂದ್ಯದಲ್ಲಿ ಪಾಕ್ ಕ್ಯಾಪ್ಟನ್ಗೆ ಕೈಕೊಡದೆ, ಟಾಸ್ ಆಗ್ತಿದ್ದಂತೆ ಪೆವಿಲಿಯನ್ಗೆ ತೆರಳಿದ್ದಾರೆ,(ಏಜೆನ್ಸೀಸ್).