ಮುಂಬೈ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿದ್ದ ಚಾಂಪಿಯನ್ಸ್ ಟ್ರೋಫಿ (Champions Trophy) ಮುಕ್ತಾಯಗೊಂಡಿದ್ದು, ಟೀಮ್ ಇಂಡಿಯಾ ಚಾಂಪಿಯನ್ಸ್ ಆಗಿ ಹೊರಹಮ್ಮಿದೆ. ಹಾಲಿ ಟೂರ್ನಿಯಲ್ಲಿ ಅಜೇಯವಾಗಿ ಕಪ್ ಗೆದ್ದಿರುವ ಟೀಮ್ ಇಂಡಿಯಾ ಮುಂಬರುವ ಐಸಿಸಿ ಹಾಗೂ ದ್ವಿಪಕ್ಷೀಯ ಸರಣಿಗಳಿಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಅಭಿಮಾನಿಗಳು ತಂಡದ ಗೆಲುವನ್ನು ಸಂಭ್ರಮಿಸುತ್ತಿದ್ದು, ನೆಚ್ಚಿನ ಆಟಗಾರರನ್ನು ಭರಮಾಡಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
2024ರಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡದ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ವಾಂಖೆಡೆ ಕ್ರೀಡಾಂಗಣದವರೆಗೂ ಓಪನ್ಬಸ್ನಲ್ಲಿ ವಿಜಯೋತ್ಸವ ರ್‍ಯಾಲಿ ಮಾಡಲಾಗಿತ್ತು. ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಬಿಸಿಸಿಐ ವತಿಯಿಂದ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಚಾಂಪಿಯನ್ಸ್ ಟ್ರೋಫಿ (Champions Trophy) ಗೆಲುವಿನ ಬಳಿಕ ರ್‍ಯಾಲಿ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಅಭಿಮಾನಿಗಳು ಊಹಿಸಿದರಾದರೂ ಬಿಸಿಸಿಐ ಅದಕ್ಕೆ ಮುಂದಾಗಿಲ್ಲ. ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬಳಿಕ ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿ ತಮ್ಮ ತಮ್ಮ ತವರೂರಿಗೆ ತೆರಳಿದ್ದು, ಬಿಸಿಸಿಐ ಕಾರ್ಯಕ್ರಮದಲ್ಲಿ ಏರ್ಪಡಿಸದಿರುವ ಕುರಿತು ಮಾಹಿತಿಯನ್ನುಹಂಚಿಕೊಂಡಿದೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, ಆಟಗಾರರು ತಾವು ಪ್ರತಿನಿಧಿಸುವ ಫ್ರಾಂಚೈಸಿ ಕ್ಯಾಂಪ್ಗಳನ್ನು ಕೂಡಿಕೊಳ್ಳುತ್ತಿದ್ದಾರೆ. ತಂಡ ಕೂಡಿಕೊಳ್ಳುವುದಕ್ಕೂ ಮುನ್ನ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದ್ದು, ಈ ಕಾರಣಕ್ಕಾಗಿ ಓಪನ್ ಬಸ್ ರ್‍ಯಾಲಿ ಮತ್ತು ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೋಚ್ ಗೌತಮ್ ಗಂಭೀರ್ ದುಬೈನಿಂದ ದೆಹಲಿಗೆ ಬಂದಿಳಿದಿದ್ದು, ನಾಯಕ ರೋಹಿತ್ ಶರ್ಮ ಮುಂಬೈನಲ್ಲಿ ಲ್ಯಾಂಡ್ ಆಗಿದ್ದಾರೆ. ಕೆಲವು ಆಟಗಾರರು ಈಗಾಗಲೇ ತಮ್ಮ ಐಪಿಎಲ್ ಫ್ರಾಂಚೈಸಿಗಳ ಶಿಬಿರವನ್ನು ಕೂಡಿಕೊಂಡಿದ್ದು, ಕೆಲವರು ಫಾರಿನ್ ಟ್ರಿಪ್ ಹೋಗಿರುವುದಾಗಿ ವರದಿಯಾಗಿದೆ. ಐಪಿಎಲ್ ಮುಗಿದ ಬಳಿಕ ಬಿಸಿಸಿಐ ಸನ್ಮಾನ ಸಮಾರಂಭವನ್ನು ಏರ್ಪಡಿಸಬಹುದು ಎಂದು ತಿಳಿದು ಬಂದಿದೆ.