ಕ್ರೀಡೆ

ಐಸಿಸಿ ಎಲೈಟ್ ಪ್ಯಾನೆಲ್​ಗೆ ನಿತಿನ್; ಅತಿ ಕಿರಿಯ ಅಂಪೈರ್ ಎಂಬ ಹೆಗ್ಗಳಿಕೆ

vinaymk1969

ದುಬೈ: ಭಾರತದ ನಿತಿನ್ ಮೆನನ್ ಐಸಿಸಿ ಅಂಪೈರ್​ಗಳ ಎಲೈಟ್ ಪ್ಯಾನೆಲ್​ಗೆ ಸೇರ್ಪಡೆಗೊಂಡ ಅತಿ ಕಿರಿಯರೆನಿಸಿದ್ದಾರೆ. ವಾರ್ಷಿಕ ಪರಾಮರ್ಶೆಯ ಬಳಿಕ ಇಂಗ್ಲೆಂಡ್​ನ ನಿಗೆಲ್ ಲಾಂಗ್​ರನ್ನು ಕೈಬಿಡಲಾಗಿದ್ದು, 36 ವರ್ಷದ ನಿತಿನ್ ಅವರನ್ನು 2020-21ರ ಋತುವಿಗೆ ಸೇರ್ಪಡೆಗೊಳಿಸಲಾಗಿದೆ.

ನಿತಿನ್ ಇದುವರೆಗೆ 3 ಟೆಸ್ಟ್, 24 ಏಕದಿನ ಮತ್ತು 16 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು, ಐಸಿಸಿ ಎಲೈಟ್ ಪ್ಯಾನೆಲ್​ಗೆ ಸೇರ್ಪಡೆಗೊಂಡ 3ನೇ ಭಾರತೀಯರಾಗಿದ್ದಾರೆ. ಭಾರತ ತಂಡದ ಮಾಜಿ ನಾಯಕರೂ ಆಗಿರುವ ಎಸ್. ವೆಂಕಟರಾಘವನ್ ಮತ್ತು ಸುಂದರಂ ರವಿ ಮೊದಲಿಬ್ಬರು. ಇಂಗ್ಲೆಂಡ್​ನ ಮೈಕೆಲ್ ಗೌಫ್ (40 ವರ್ಷ) ಈ ಹಿಂದೆ ಐಸಿಸಿ ಎಲೈಟ್ ಪ್ಯಾನೆಲ್​ನಲ್ಲಿ ಸ್ಥಾನ ಪಡೆದಿದ್ದ ಅತಿ ಕಿರಿಯ ಅಂಪೈರ್ ಆಗಿದ್ದರು.

‘ವಿಶ್ವದ ಪ್ರಮುಖ ಅಂಪೈರ್ ಮತ್ತು ರೆಫ್ರಿಗಳ ಜತೆಗೆ ಕಾರ್ಯನಿರ್ವಹಿಸುವುದು ಯಾವಾಗಲೂ ನನ್ನ ಕನಸಾಗಿತ್ತು. ಐಸಿಸಿ ಎಲೈಟ್ ಪ್ಯಾನೆಲ್​ನಲ್ಲಿ ಭಾರತದ ಧ್ವಜ ಎತ್ತಿಹಿಡಿಯುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರತೀಯ ಅಂಪೈರ್​ಗಳು ಈ ಪ್ಯಾನೆಲ್​ಗೆ ಸೇರ್ಪಡೆಗೊಳ್ಳುವುದನ್ನು ನಿರೀಕ್ಷಿಸುವೆ’ ಎಂದು ಮಧ್ಯಪ್ರದೇಶದ ಇಂದೋರ್​ನವರಾದ ನಿತಿನ್ ಮೆನನ್ ಐಸಿಸಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿತಿನ್ ಐಸಿಸಿ ಎಮಿರೇಟ್ಸ್ ಅಂಪೈರ್ ಆಗಿ 2018 ಮತ್ತು 2020ರ ಮಹಿಳೆಯರ ಟಿ20 ವಿಶ್ವಕಪ್​ನಲ್ಲೂ ಕಾರ್ಯನಿರ್ವಹಿಸಿದ್ದಾರೆ. ‘ಕ್ರಿಕೆಟಿಗನಾಗಿ ದೇಶವನ್ನು ಪ್ರತಿನಿಧಿಸುವುದು ನನ್ನ ಆದ್ಯತೆಯಾಗಿತ್ತು. ಆದರೆ 22ನೇ ವಯಸ್ಸಿನಲ್ಲೇ ಈ ಆಸೆ ಕೈಬಿಡಬೇಕಾಯಿತು. 23ನೇ ವಯಸ್ಸಿನಲ್ಲೇ ಸೀನಿಯರ್ ಅಂಪೈರ್ ಆಗಿದ್ದೆ. ಕ್ರಿಕೆಟಿಗನಾಗಿ ವೃತ್ತಿಜೀವನ ಕಂಡುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಅಂಪೈರ್ ಆಗುವತ್ತ ಗಮನ ಹರಿಸಲು ನಾನು ನಿರ್ಧರಿಸಿದ್ದೆ’ ಎಂದು ನಿತಿನ್ ವಿವರಿಸಿದ್ದಾರೆ. ಮುಂದಿನ ವರ್ಷದ ಆಶಸ್ ಮತ್ತು ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲೂ ಕಾರ್ಯನಿರ್ವಹಿಸಲು ಅವರು ಈಗ ಅರ್ಹರಾಗಿದ್ದಾರೆ.

23ನೇ ವಯಸ್ಸಿನಲ್ಲೇ ಅಂಪೈರ್!: ಭಾರತದ ಅಂಪೈರ್​ಗಳ ಕಾರ್ಯಕ್ಷಮತೆಯ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದರೂ, ನಿತಿನ್ ಮೆನನ್ ಅವರ ನಿರ್ವಹಣೆ ಮಾತ್ರ ಗಮನಸೆಳೆಯುವಂತಿತ್ತು. ಅವರ ತಂದೆ ನರೇಂದ್ರ ಮೆನನ್ ಕೂಡ ಅಂತಾರಾಷ್ಟ್ರೀಯ ಅಂಪೈರ್ ಆಗಿದ್ದರು. ಕ್ರಿಕೆಟಿಗರಾಗಿ ನಿತಿನ್ ಮೆನನ್ ಅವರ ವೃತ್ತಿಜೀವನ ಅಲ್ಪಾಯುಷಿಯಾಗಿತ್ತು. ಅವರು ಮಧ್ಯಪ್ರದೇಶ ಪರ 2 ಲಿಸ್ಟ್ ಎ ಪಂದ್ಯಗಳನ್ನಷ್ಟೇ ಆಡಿದ್ದರು. 2006ರಲ್ಲಿ ತಂದೆಯ ಸೂಚನೆಯಂತೆ ಅಂಪೈರ್ ಪರೀಕ್ಷೆ ಬರೆದಿದ್ದೆ. ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಅಂಪೈರ್ ಆಗಿ ವೃತ್ತಿಜೀವನ ಕಂಡುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾನು ಪರೀಕ್ಷೆ ಬರೆದು ಅಂಪೈರ್ ಆಗಿದ್ದೆ ಎಂದು ನಿತಿನ್ ಮೆಲುಕು ಹಾಕಿದ್ದಾರೆ. 23ನೇ ವಯಸ್ಸಿನಲ್ಲೇ ಅಂಪೈರ್ ಆದ ಅವರು ಈಗ 13 ವರ್ಷಗಳ ಅನುಭವ ಪಡೆದಿದ್ದಾರೆ.