ಏಷ್ಯನ್ ಅಂಡರ್-20 ಅಥ್ಲೆಟಿಕ್ಸ್: ಕರ್ನಾಟಕದ ನಿಖಿಲ್ ಚಂದ್ರಶೇಖರ್ಗೆ ಚಿನ್ನದ ಪದಕ
ಬೆಂಗಳೂರು: ಕರ್ನಾಟಕದ ನಿಖಿಲ್ ಚಂದ್ರಶೇಖರ್ (Nikhil Chandrashekar) ಹಾಂಕಾಂಗ್ನಲ್ಲಿ ನಡೆಯುತ್ತಿರುವ ಏಷ್ಯನ್ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ (Asian U20 Championship) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು ಪುರುಷರ 3 ಸಾವಿರ ಮೀ. ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಹಾಂಕಾಂಗ್ನ ಕೈ ತಕ್ ಯೂತ್ ಸ್ಪೋರ್ಟ್ಸ್ ಗ್ರೌಂಡ್ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ನಿಖಿಲ್ 9 ನಿಮಿಷ, 25.44 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಕೂಟದ ಮೂರನೇ ದಿನ ಭಾರತ ಒಟ್ಟು 3 ಚಿನ್ನದ ಪದಕ ಬಾಚಿಕೊಂಡಿತು. ಈ ಮೂಲಕ ಭಾರತ ಕೂಟದ ಪದಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುರಿದಿದೆ. ಚೀನಾ 10 ಚಿನ್ನದ ಪದಕದೊಂದಿಗೆ ಅಗ್ರಸ್ಥಾನದಲ್ಲಿದೆ.
ಭಾರತದ ಬಸಂತ್ ಹೈಜಂಪ್ ಮತ್ತು ಶಹನವಾಜ್ ಖಾನ್ ಲಾಂಗ್ ಜಂಪ್ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು. ಇದರಿಂದ ಭಾರತ ಕೂಟದಲ್ಲಿ ಇದುವರೆಗೆ ಗೆದ್ದ ಚಿನ್ನದ ಪದಕಗಳ ಸಂಖ್ಯೆ 7ಕ್ಕೇರಿದೆ. ಭಾರತದ ಆರತಿ ಮಹಿಳೆಯರ 200 ಮೀ. ಓಟದಲ್ಲಿ 24.12 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಒಲಿಸಿಕೊಂಡರು.