ಕ್ರೀಡೆ

ಚೆನ್ನೈ ಟೆಸ್ಟ್‌ಗೆ ಆಯ್ಕೆ ಗೊಂದಲದಲ್ಲಿ ಟೀಮ್ ಇಂಡಿಯಾ; 2ನೇ ವೇಗಿ, ಆಲ್ರೌಂಡರ್ ಯಾರು?

ಚೆನ್ನೈ: ಪ್ರಮುಖ ಆಟಗಾರರ ಗೈರಿನ ನಡುವೆಯೂ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವಿನ ಸಾಧನೆ ತೋರಿರುವ ಟೀಮ್ ಇಂಡಿಯಾ, ತವರಿನಲ್ಲಿ ಕ್ರಿಕೆಟ್ ಜನಕರ ಸವಾಲು ಎದುರಿಸಲು ಸಜ್ಜಾಗುತ್ತಿದೆ. ಆಸೀಸ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಭಾರತ ತಂಡ ಸಮರ್ಥ ಆಡುವ ಹನ್ನೊಂದರ ಬಳಗದ ಆಯ್ಕೆಗೆ ಪರದಾಡಿತ್ತು. ಇದೀಗ ಪ್ರಮುಖ ಆಟಗಾರರ ವಾಪಸಾತಿಯಿಂದ ಭಾರತ ತಂಡಕ್ಕೆ ಮತ್ತೆ ಹನ್ನೊಂದರ ಬಳಗದ ಆಯ್ಕೆಯಲ್ಲಿ ಕೆಲ ಗೊಂದಲಗಳು ಉಂಟಾಗಿವೆ.

ಆಸೀಸ್ ಪ್ರವಾಸದಲ್ಲಿ ಗಾಯಗೊಂಡ ಮೊಹಮದ್ ಶಮಿ ಮತ್ತು ರವೀಂದ್ರ ಜಡೇಜಾ ಹೊರತಾಗಿ ಇತರೆಲ್ಲ ಪ್ರಮುಖ ಆಟಗಾರರು ಈಗ ಫಿಟ್ ಆಗಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಲು ಲಭ್ಯರಿದ್ದಾರೆ. ಹೀಗಾಗಿ ಕೆಲ ವಿಭಾಗಗಳಲ್ಲಿ ಆಯ್ಕೆ ಗೊಂದಲ ಮೂಡಿದೆ. ಬ್ಯಾಟಿಂಗ್‌ಗಿಂತ ಬೌಲಿಂಗ್ ವಿಭಾಗದಲ್ಲೇ ಈ ಗೊಂದಲ ಹೆಚ್ಚಿದೆ. 2ನೇ ವೇಗದ ಬೌಲರ್ ಯಾರು ಮತ್ತು ರವೀಂದ್ರ ಜಡೇಜಾ ಸ್ಥಾನವನ್ನು ತುಂಬುವ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಯಾರು ಎಂಬ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಶುಕ್ರವಾರದಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಸ್ಪಿನ್ ಸ್ನೇಹಿಯಾಗಿದ್ದು, ಭಾರತ ಇಬ್ಬರು ವೇಗಿಗಳು ಮತ್ತು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಪಿಚ್ ಮೇಲೆ ಸ್ವಲ್ಪ ಹಸಿರು ಹುಲ್ಲು ಇರುವುದರಿಂದ ವೇಗದ ಬೌಲಿಂಗ್ ಸ್ನೇಹಿಯಾಗಿ ವರ್ತಿಸಬಹುದೆಂಬ ವರದಿಗಳನ್ನು ಬಿಸಿಸಿಐ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. ಚೆನ್ನೈನ ಸುಡುಬಿಸಿಲಿನಿಂದಾಗಿ ಪಿಚ್ ಬೇಗನೆ ಬಿರುಕುಬಿಡಬಾರದೆಂಬ ಕಾರಣಕ್ಕಾಗಿ ಮಾತ್ರ ಹಸಿರು ಹುಲ್ಲು ಉಳಿಸಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಶಾಂತ್-ಸಿರಾಜ್ ಪೈಪೋಟಿ

ತವರಿನಲ್ಲಿ ಮೊದಲ ಟೆಸ್ಟ್ ಆಡಲು ಸಜ್ಜಾಗಿರುವ ಜಸ್‌ಪ್ರೀತ್ ಬುಮ್ರಾ ಖಂಡಿತವಾಗಿಯೂ ಮೊದಲ ಆದ್ಯತೆಯ ವೇಗಿಯಾಗಿರುತ್ತಾರೆ. ಇವರೊಂದಿಗೆ ಹೊಸ ಚೆಂಡು ಹಂಚಿಕೊಳ್ಳಲು ಅನುಭವಿ ಇಶಾಂತ್ ಶರ್ಮ ಮತ್ತು ಯುವ ವೇಗಿ ಮೊಹಮದ್ ಸಿರಾಜ್ ನಡುವೆ ಪೈಪೋಟಿ ಏರ್ಪಟ್ಟಿದೆ. ಗಾಯದಿಂದಾಗಿ ಆಸೀಸ್ ಪ್ರವಾಸ ತಪ್ಪಿಸಿಕೊಂಡಿದ್ದ ಇಶಾಂತ್, ಈಗ ಪೂರ್ಣ ಫಿಟ್ ಆಗಿದ್ದು, ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೂ ಮರಳಿದ್ದಾರೆ. ಅಲ್ಲಿ ಆಡಿದ 4 ಪಂದ್ಯಗಳಲ್ಲಿ 14.1 ಓವರ್ ಎಸೆದಿದ್ದರು. ಇನ್ನು ಸಿರಾಜ್ ಆಸೀಸ್‌ನಲ್ಲಿ ಆಡಿದ 3 ಟೆಸ್ಟ್‌ಗಳಲ್ಲಿ 13 ವಿಕೆಟ್ ಕಬಳಿಸಿ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದರು. ಬ್ರಿಸ್ಬೇನ್‌ನಲ್ಲಿ 5 ವಿಕೆಟ್ ಗೊಂಚಲು ಕೂಡ ಪಡೆದಿದ್ದರು. ಇನ್ನು 32 ವರ್ಷದ ಇಶಾಂತ್ ಸರಿಸುಮಾರು ಒಂದು ವರ್ಷದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. 2ನೇ ವೇಗಿಯ ಬಗ್ಗೆ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಒಟ್ಟಾಗಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಆಲ್ರೌಂಡರ್ ಸ್ಥಾನಕ್ಕೆ ವಾಷಿಂಗ್ಟನ್-ಅಕ್ಷರ್ ಸ್ಪರ್ಧೆ

ಸ್ಪಿನ್ ವಿಭಾಗವನ್ನು ಅನುಭವಿ ಆರ್. ಅಶ್ವಿನ್ ಮುನ್ನಡೆಸುವುದು ನಿಶ್ಚಿತ. ಅವರಿಗೆ ಇದು ತವರು ಮೈದಾನವೂ ಆಗಿದೆ. 2ನೇ ತಜ್ಞ ಸ್ಪಿನ್ನರ್ ಸ್ಥಾನಕ್ಕೆ ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಸ್ಪರ್ಧೆಯಲ್ಲಿದ್ದಾರೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸ್ಥಾನಕ್ಕೆ, ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿ ಮಿಂಚಿರುವ ವಾಷಿಂಗ್ಟನ್ ಸುಂದರ್ ಮತ್ತು ಗುಜರಾತ್‌ನ ಅಕ್ಷರ್ ಪಟೇಲ್ ನಡುವೆ ಸ್ಪರ್ಧೆ ಇದೆ. ವಾಷಿಂಗ್ಟನ್ ಈಗಾಗಲೆ ಆಸೀಸ್‌ನಲ್ಲಿ ಆಲ್ರೌಂಡರ್ ಸಾಮರ್ಥ್ಯ ಸಾಬೀತು ಪಡಿಸಿದ್ದು, ಚೆನ್ನೈ ಅವರಿಗೆ ತವರು ಮೈದಾನವೂ ಆಗಿದೆ. ಅಕ್ಷರ್ ಪಟೇಲ್ ಅವರು ಜಡೇಜಾರಂತೆಯೇ ಎಡಗೈ ಸ್ಪಿನ್ನರ್ ಆಗಿರುವುದು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿಯೂ ಆಡುವ ಸಾಮರ್ಥ್ಯದಿಂದ ಸ್ಪರ್ಧೆಯೊಡ್ಡುತ್ತಿದ್ದಾರೆ. ಅಕ್ಷರ್ ಇನ್ನೂ ಟೆಸ್ಟ್ ಪದಾರ್ಪಣೆ ಮಾಡಿಲ್ಲ. ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಾಷಿಂಗ್ಟನ್‌ಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಅಗ್ರ 7 ಬ್ಯಾಟ್ಸ್‌ವನ್‌ಗಳಲ್ಲಿ ಮೂವರು ಎಡಚರು. ಹೀಗಾಗಿ ಭಾರತ ಇಬ್ಬರು ಆಫ್​-ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಕಡಿಮೆ. ಆದರೆ ಬ್ರಿಸ್ಬೇನ್‌ನಲ್ಲಿ ಉಪಯುಕ್ತ ಅರ್ಧಶತಕ ಮತ್ತು 4 ವಿಕೆಟ್ ಕಬಳಿಸಿ ಮಿಂಚಿದ ವಾಷಿಂಗ್ಟನ್‌ರನ್ನು ಮರು ಪಂದ್ಯದಲ್ಲೇ ಬೆಂಚ್ ಕಾಯಿಸುವಂತೆ ಮಾಡಿಸುವುದು ಕೂಡ ಕಷ್ಟಕರ.

ಪಾಂಡ್ಯಗೆ ಮೊದಲ ಆದ್ಯತೆ ಇಲ್ಲ?

ತಂದೆಯ ನಿಧನದ ಹಿನ್ನೆಲೆಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಚೆನ್ನೈನಲ್ಲಿ ಒಂದು ದಿನ ತಡವಾಗಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಅವರು ಬುಧವಾರವಷ್ಟೇ ಕ್ವಾರಂಟೈನ್ ಮುಗಿಸಿ ತಂಡದ ಜತೆ ಅಭ್ಯಾಸಕ್ಕಿಳಿಯಲಿದ್ದಾರೆ. ಈ ನಡುವೆ, ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ತವರಿನ ಸರಣಿಯಲ್ಲಿ ಹನ್ನೊಂದರ ಬಳಗದಲ್ಲಿ ಮೊದಲ ಆಯ್ಕೆಯ ಆಟಗಾರರಾಗಿ ಕಣಕ್ಕಿಳಿಯ ಸಾಧ್ಯತೆ ಕಡಿಮೆ ಇದೆ. ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ಪ್ರವಾಸದ 5 ಪಂದ್ಯಗಳ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಪಾಂಡ್ಯಗೆ ಭಾರತ ತಂಡ ಈಗಲೇ ಹೆಚ್ಚಿನ ಕಾರ್ಯದೊತ್ತಡ ನೀಡುವ ನಿರೀಕ್ಷೆ ಇಲ್ಲ. ಸರಣಿಯ ಮುಂದಿನ ಪಂದ್ಯಗಳಲ್ಲಿ ಅಗತ್ಯವೆನಿಸಿದರೆ ಮಾತ್ರ ಅವರು ಆಡುವ ಸಾಧ್ಯತೆ ಇದೆ. ತವರಿನ ಸ್ಪಿನ್ ಸ್ನೇಹಿ ಪಿಚ್‌ಗಿಂತ ಇಂಗ್ಲೆಂಡ್‌ನ ವೇಗದ ಬೌಲಿಂಗ್ ಸ್ನೇಹಿ ಪಿಚ್‌ಗಳಲ್ಲೇ ಭಾರತಕ್ಕೆ ಅವರ ಅಗತ್ಯ ಹೆಚ್ಚಿರಲಿದೆ.

ಮೊದಲ ಟೆಸ್ಟ್‌ಗೆ ಸಂಭಾವ್ಯ ತಂಡ

ರೋಹಿತ್ ಶರ್ಮ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ವಾಷಿಂಗ್ಟನ್ ಸುಂದರ್/ಅಕ್ಷರ್ ಪಟೇಲ್, ಆರ್. ಅಶ್ವಿನ್, ಕುಲದೀಪ್ ಯಾದವ್, ಮೊಹಮದ್ ಸಿರಾಜ್/ಇಶಾಂತ್ ಶರ್ಮ, ಜಸ್‌ಪ್ರೀತ್ ಬುಮ್ರಾ.

ರಾಹುಲ್ ಸಂಪೂರ್ಣ ಫಿಟ್

ಎಡ ಮಣಿಕಟ್ಟಿನ ಗಾಯದಿಂದಾಗಿ ಆಸೀಸ್ ಪ್ರವಾಸ ಮೊಟಕುಗೊಳಿಸಿ ತವರಿಗೆ ಮರಳಿದ್ದ ಕನ್ನಡಿಗ ಕೆಎಲ್ ರಾಹುಲ್ ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರ ಪೂರ್ಣಗೊಳಿಸಿದ್ದಾರೆ. ಇದೀಗ ಸಂಪೂರ್ಣ ಫಿಟ್ ಆಗಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸುವತ್ತ ಗಮನ ಹರಿಸಿದ್ದೇನೆ ಎಂದು 28 ವರ್ಷದ ರಾಹುಲ್ ಮಂಗಳವಾರ ಟ್ವೀಟಿಸಿದ್ದಾರೆ. ಜತೆಗೆ ಚೆನ್ನೈಗೆ ವಿಮಾನ ಏರುತ್ತಿರುವ ಚಿತ್ರವನ್ನೂ ಪ್ರಕಟಿಸಿದ್ದಾರೆ. ಆಸೀಸ್‌ನಲ್ಲಿ ಟೆಸ್ಟ್ ಸರಣಿಯ ವೇಳೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ರಾಹುಲ್ ಗಾಯಗೊಂಡಿದ್ದರು. ಇದರಿಂದಾಗಿ ಕೊನೇ 2 ಟೆಸ್ಟ್‌ಗೆ ಅಲಭ್ಯರಾಗಿದ್ದರು. ಮೊದಲ 2 ಟೆಸ್ಟ್‌ಗಳಲ್ಲೂ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

ಪ್ರೇಕ್ಷಕರ ಪ್ರವೇಶಕ್ಕೆ ಇಂಗ್ಲೆಂಡ್ ವಿರೋಧ!

ಟೆಸ್ಟ್ ಸರಣಿಯ ವೇಳೆ ಶೇ. 50 ಪ್ರೇಕ್ಷಕರಿಗೆ ಪ್ರವೇಶ ನೀಡುವ ಬಿಸಿಸಿಐ ಯೋಜನೆಗೆ ಪ್ರವಾಸಿ ಇಂಗ್ಲೆಂಡ್ ತಂಡದಿಂದ ವಿರೋಧ ವ್ಯಕ್ತವಾಗಿದೆ. ಪ್ರವಾಸ ಪೂರ್ವ ಒಪ್ಪಂದದ ಅನ್ವಯ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಇರಲಿಲ್ಲ ಎಂದು ಇಂಗ್ಲೆಂಡ್ ತಗಾದೆ ತೆಗೆದಿದೆ. ಹೀಗಾಗಿ ಭಾರತದಲ್ಲಿ ಈಗ ಕರೊನಾ ಪರಿಸ್ಥಿತಿ ಸುಧಾರಣೆಯಾಗಿರುವ ಬಗ್ಗೆ ಇಂಗ್ಲೆಂಡ್‌ಗೆ ಮನವರಿಕೆ ಮಾಡುವ ಪ್ರಯತ್ನವನ್ನು ಬಿಸಿಸಿಐ ನಡೆಸುತ್ತಿದೆ. ಈ ಮೂಲಕ ಪ್ರೇಕ್ಷಕರ ಪ್ರವೇಶಕ್ಕೆ ಇಂಗ್ಲೆಂಡ್ ಮನವೊಲಿಸುವ ಪ್ರಯತ್ನ ನಡೆದಿದೆ. ಇದರ ನಡುವೆಯೂ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಟೆಸ್ಟ್‌ನಿಂದ ಪ್ರೇಕ್ಷಕರಿಗೆ ಪ್ರವೇಶ ಲಭಿಸುವ ನಿರೀಕ್ಷೆ ಇದೆ.