ಕ್ರೀಡೆ

ನ್ಯೂಜಿಲೆಂಡ್​ಗೆ ಚೊಚ್ಚಲ ಮಹಿಳಾ ಟಿ20 ವಿಶ್ವಕಪ್​ ಕಿರೀಟ; ದ. ಆಫ್ರಿಕಾದ ಪುರುಷರಂತೆ ವನಿತೆಯರಿಗೂ ಫೈನಲ್​ನಲ್ಲಿ ನಿರಾಸೆ!

ದುಬೈ: ಅಮೆಲಿಯಾ ಕೆರ್​ (43 ರನ್​, 38 ಎಸೆತ, 4 ಬೌಂಡರಿ, 24ಕ್ಕೆ 3) ಆಲ್ರೌಂಡ್​ ಆಟದ ನೆರವಿನಿಂದ ನ್ಯೂಜಿಲೆಂಡ್​ ತಂಡ ಮಹಿಳಾ ಟಿ20 ವಿಶ್ವಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಎದುರು 32 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಕಿವೀಸ್​ ಮಹಿಳೆಯರು ಚೊಚ್ಚಲ ಟಿ20 ವಿಶ್ವಕಪ್​ ಕಿರೀಟ ಒಲಿಸಿಕೊಂಡರೆ, ದಣ ಆಫ್ರಿಕಾದ ಮಹಿಳೆಯರು ಪುರುಷರಂತೆ ಫೈನಲ್​ನಲ್ಲಿ ಮುಗ್ಗರಿಸಿ ಸತತ 2ನೇ ಬಾರಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು. ಹಾಲಿ ವರ್ಷದ ಪುರುಷರ ಟಿ20 ವಿಶ್ವಕಪ್​ನಲ್ಲೂ ದ. ಆಫ್ರಿಕಾ ತಂಡ ಫೈನಲ್​ನಲ್ಲಿ ಭಾರತದ ಎದುರು ಮುಗ್ಗರಿಸಿತ್ತು.

ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ನ್ಯೂಜಿಲೆಂಡ್​, ಅನುಭವಿ ಸುಜಿ ಬೇಟ್ಸ್​ (32), ಕೆರ್​ ಮತ್ತು ಬ್ರೂಕ್​ ಹ್ಯಾಲಿಡೇ (38 ರನ್​, 28 ಎಸೆತ, 3 ಬೌಂಡರಿ) ಉಪಯಕ್ತ ಆಟದಿಂದ 5 ವಿಕೆಟ್​ಗೆ 158 ರನ್​ ಕಲೆಹಾಕಿತು. ಅಂತಿಮ ಐದು ಓವರ್​ಗಳಲ್ಲಿ ನ್ಯೂಜಿಲೆಂಡ್​ 48 ರನ್​ ಕಸಿಯಿತು. ಪ್ರತಿಯಾಗಿ ದ. ಆಫ್ರಿಕಾ ಪವರ್​ಪ್ಲೇನಲ್ಲಿ 47 ರನ್​ ಗಳಿಸಿ ಉತ್ತಮ ಆರಂಭ ಪಡೆಯಿತು. ಆದರೆ ನಂತರದಲ್ಲಿ ಕುಸಿತ ಕಂಡ ದಣ ಆಫ್ರಿಕಾ ಅಂತಿಮವಾಗಿ 9 ವಿಕೆಟ್​ಗೆ 126 ರನ್​ ಗಳಿಸಲಷ್ಟೇ ಶಕ್ತವಾಯಿತು. 3ನೇ ಮತ್ತು 14 ವರ್ಷಗಳ ಬಳಿಕ ಫೈನಲ್​ಗೇರಿದ್ದ ಕಿವೀಸ್​, ಮಹಿಳಾ ಟಿ20 ವಿಶ್ವಕಪ್​ ಗೆದ್ದ 4ನೇ ತಂಡವೆನಿಸಿತು. ಆಸ್ಟ್ರೆಲಿಯಾ (6), ಇಂಗ್ಲೆಂಡ್​, ವೆಸ್ಟ್​ ಇಂಡೀಸ್​ ಹಿಂದಿನ 3 ತಂಡಗಳು.

ನ್ಯೂಜಿಲೆಂಡ್​: 5 ವಿಕೆಟ್​ಗೆ 158 (ಬೇಟ್ಸ್​ 32, ಜಾರ್ಜಿಯಾ ಪ್ಲಿಮ್ಮರ್​ 9, ಅಮೆಲಿಯಾ ಕೆರ್​ 43, ಸೋಫಿ ಡಿವೈನ್​ 6, ಬ್ರೂಕ್​ ಹ್ಯಾಲಿ ಡೇ 38, ಗ್ರೀನ್​ 12, ಇಸಾಬೆಲ್ಲಾ 3, ಮ್ಲಾಬಾ 31ಕ್ಕೆ 2, ಡಿ ಕ್ಲರ್ಕ್​ 17ಕ್ಕೆ 1). ದ. ಆಫ್ರಿಕಾ: 9 ವಿಕೆಟ್​ಗೆ 126 (ವೊಲ್ವಾರ್ಡ್​ 33, ಬ್ರಿಟ್ಸ್​ 17, ಬೋಷ್​ 9, ಕಾಪ್​ 8, ಡಿಕ್ಲರ್ಕ್​ 6, ಟೆಆನ್​ 14, ಕೆರ್​ 24ಕ್ಕೆ 3, ಕರ್ಸನ್​ 22ಕ್ಕೆ 1, ಮೈರ್​ 25ಕ್ಕೆ 3).

ಸಮಾನ ಬಹುಮಾನ ಮೊತ್ತ
ದಣ ಆಫ್ರಿಕಾ ಮಹಿಳಾ ತಂಡ ಟಿ20 ವಿಶ್ವಕಪ್​ನಲ್ಲಿ ಪುರುಷರಷ್ಟೇ ಬಹುಮಾನ ಮೊತ್ತ ಪಡೆದ ಮೊದಲ ತಂಡವೆನಿಸಿತು. ಐಸಿಸಿ ಇದೇ ಮೊದಲ ಬಾರಿಗೆ ಸಮಾನ ಬಹುಮಾನ ವಿತರಿಸಿದ್ದು, ವಿಜೇತ ತಂಡ ಒಟ್ಟು 19.59 ಕೋಟಿ ರೂ. ಬಹುಮಾನ ಮೊತ್ತ ಪಡೆದರೆ, ರನ್ನರ್​ಅಪ್​ ಕಿವೀಸ್​ ತಂಡ 9.79 ಕೋಟಿ ರೂ. ಗಳಿಸಿತು.

2: ನ್ಯೂಜಿಲೆಂಡ್​ ಮಹಿಳೆಯರ ಏಕದಿನ&ಟಿ20 ವಿಶ್ವಕಪ್​ ಎರಡೂ ಗೆದ್ದ 3ನೇ ತಂಡವೆನಿಸಿದೆ. ಆಸೀಸ್​, ಇಂಗ್ಲೆಂಡ್​ ಮೊದಲೆರಡು ತಂಡಗಳಾಗಿವೆ. ಕಿವೀಸ್​ 2000ದಲ್ಲಿ ಮಹಿಳಾ ಏಕದಿನ ವಿಶ್ವಕಪ್​ ಗೆದ್ದಿತ್ತು.

3. ದ.ಆಫ್ರಿಕಾ ಒಂದೇ ವರ್ಷದಲ್ಲಿ ಪುರುಷರ ಹಾಗೂ ಮಹಿಳಾ ಟಿ20 ವಿಶ್ವಕಪ್​ ಫೈನಲ್​ ಆಡಿದ
3ನೇ ತಂಡ ಎನಿಸಿತು. ಆಸ್ಟ್ರೆಲಿಯಾ (2010), ವೆಸ್ಟ್​ ಇಂಡೀಸ್​ (2016) ಹಿಂದಿನ 2 ತಂಡಗಳು.

ಮಿಥಾಲಿ ಹಿಂದಿಕ್ಕಿದ್ದ ಬೇಟ್ಸ್​
ಸುಜಿ ಬೇಟ್ಸ್​ (334)ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ್ತಿ ಎನಿಸಿದರು. ಇದರೊಂದಿಗೆ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್​ (333) ದಾಖಲೆಯನ್ನು ಹಿಂದಿಕ್ಕಿದ್ದರು. 14 ವರ್ಷಗಳ ವೃತ್ತೀಜಿವನದಲ್ಲಿ 163 ಏಕದಿನ ಆಡಿರುವ ಸುಜಿ ಬೇಟ್ಸ್​ 5,718 ರನ್​ ಕಲೆಹಾಕಿದ್ದು, 171 ಟಿ20ಯಲ್ಲಿ 4,552 ರನ್​ ಪೇರಿಸಿದ್ದಾರೆ. 2006ರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ 37 ವರ್ಷದ ಸುಜಿ ಬೇಟ್ಸ್​, 2008ರ ಬೀಜಿಂಗ್​ ಒಲಿಂಪಿಕ್ಸ್​ನ ಬಾಸ್ಕೆಟ್​ಬಾಲ್​ನಲ್ಲಿಯೂ ನ್ಯೂಜಿಲೆಂಡ್​ ತಂಡವನ್ನು ಪ್ರತಿನಿಧಿಸಿದ್ದಾರೆ.