ವೆಲ್ಲಿಂಗ್ಟನ್: ಭಾರತದ ಜತೆಗಿನ ಕ್ರೀಡಾ ಸಂಬಂಧ 100 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡ ಏಕದಿನ ಸರಣಿಯ ವೇಳೆ ಕಪು$್ಪ ಬಣ್ಣದ ವಿಶೇಷ ವಿನ್ಯಾಸದ ಜೆರ್ಸಿಯನ್ನು ಧರಿಸಿ ಆಡಲಿದೆ. ಉಭಯ ದೇಶಗಳ ಕ್ರೀಡಾ ಸಂಬಂಧವನ್ನು ಸಂಭ್ರಮಿಸುವ ಸಲುವಾಗಿ, ಏಕತೆ, ಒಗ್ಗಟ್ಟು, ಐಕ್ಯಮತ ಮತ್ತು ಸಂಟಿತ ಶಕ್ತಿಯನ್ನು ಸೂಚಿಸುವ ಸಲುವಾಗಿ ನ್ಯೂಜಿಲೆಂಡ್ನ ಮಾವೋರಿ ಪರಿಕಲ್ಪನೆಯ "ಕೊಟಾಹಿತಂಗ' ಹೆಸರಿನ ಜೆರ್ಸಿ ಇದಾಗಿದೆ.
ವಿನ್ಯಾಸಕಾರರಾದ ಬೆನ್ ಥಾಮಸನ್, ಭಾರತ ಮೂಲದ ಶಿವ ನರಂದಾಸ್ ಮತ್ತು ಜೈ ಪಂಚಾ ಈ ಜೆರ್ಸಿ ವಿನ್ಯಾಸಗೊಳಿಸಿದ್ದಾರೆ. ಭಾರತದ ರಾಷ್ಟ್ರೀಯ ಹೂವಾದ ಕಮಲ, ಭಾರತೀಯ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದ ಓಜಿ ಮಾದರಿ ಮತ್ತು ನ್ಯೂಜಿಲೆಂಡ್ನ ಮೂಲನಿವಾಸಿಗಳಾದ ಮಾವೋರಿ ಜನಾಂಗದ ವಿನ್ಯಾಸದಿಂದ ಮಂಡಲವನ್ನು ಜೆರ್ಸಿಯ ವಿನ್ಯಾಸದಲ್ಲಿ ಅಳವಡಿಸಿಕೊಳ್ಳಲಾಗಿದೆ.
ಭಾರತ ವಿರುದ್ಧ ಏಕದಿನಕ್ಕೆ ಕಿವೀಸ್ ಸರಣಿ ಪ್ರಕಟ: ಕೊನೇ 2 ಪಂದ್ಯಗಳಿಗೆ ಟೆಸ್ಟ್ ಆಟಗಾರರಿಲ್ಲ
ಪ್ರವಾಸಿ ಭಾರತ ತಂಡ ಈಗಾಗಲೆ ಯೋಜನೆ ಹಾಕಿಕೊಂಡಿರುವಂತೆ, ಆತಿಥೇಯ ನ್ಯೂಜಿಲೆಂಡ್ ಕೂಡ ಉಭಯ ತಂಡಗಳ ಏಕದಿನ ಸರಣಿಯ ಮೊದಲ 3 ಪಂದ್ಯಗಳಲ್ಲಿ ಮಾತ್ರ ತನ್ನ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದ್ದು, ಕೊನೇ 2 ಪಂದ್ಯಗಳಿಂದ ಟೆಸ್ಟ್ ತಂಡದ ಆಟಗಾರರನ್ನು ಕೈಬಿಡಲಿದೆ. ಭುಜದ ಗಾಯದಿಂದಾಗಿ ಭಾರತ ವಿರುದ್ಧದ ಟಿ20 ಸರಣಿ ತಪ್ಪಿಸಿಕೊಂಡಿರುವ ಬೆಂಗಳೂರು ಮೂಲದ ರಚಿನ್ ರವೀಂದ್ರ ನವೆಂಬರ್ 4ರಿಂದ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿಗೆ ಫಿಟ್ ಆಗಿದ್ದಾರೆ. ಆದರೆ ಟೆಸ್ಟ್ ಆಟಗಾರರೂ ಆಗಿರುವುದರಿಂದ ರಚಿನ್, ಕೊನೇ 2 ಏಕದಿನ ತಪ್ಪಿಸಿಕೊಳ್ಳಲಿದ್ದಾರೆ.
ನ.15ಕ್ಕೆ ಏಕದಿನ ಸರಣಿ ಮುಗಿದರೆ, ಅದರ ಬೆನ್ನಲ್ಲೇ ನ.19ರಿಂದ ಟೆಸ್ಟ್ ಸರಣಿ ಶುರುವಾಗಲಿದೆ. ಹೀಗಾಗಿ ಭಾರತ ಕೂಡ ಕೊನೇ 2 ಏಕದಿನ ಪಂದ್ಯಗಳಿಗೆ ಟೆಸ್ಟ್ ಆಟಗಾರರನ್ನು ಕೈಬಿಟ್ಟು, ಟೆಸ್ಟ್ ಸರಣಿಯ ಸಿದ್ಧತೆ ಅವಕಾಶ ಕಲ್ಪಿಸುವ ಯೋಜನೆಯಲ್ಲಿದೆ. ನ್ಯೂಜಿಲೆಂಡ್ನ 6 ಆಟಗಾರರು ಮಾತ್ರ ಎಲ್ಲ 5 ಏಕದಿನ ಪಂದ್ಯಗಳಲ್ಲಿ ಆಡಲಿದ್ದಾರೆ. ಅವರೆಂದರೆ ನಾಯಕ ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಜೇಕಬ್ ಡಫಿ, ವಿಲ್ ಯಂಗ್ ಮತ್ತು ಬ್ಲೇರ್ ಟಿಕ್ನರ್. ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲಾಥಮ್ (ವಿ.ಕೀ), ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವಿಂದ್ರ, ನಾಥನ್ ಸ್ಮಿತ್ ಮೊದಲ 3 ಪಂದ್ಯಗಳಲ್ಲಿ ಮಾತ್ರ ಆಡಲಿದ್ದರೆ, ಕೊನೇ 2 ಪಂದ್ಯಗಳಿಗೆ ಫಿನ್ ಅಲೆನ್, ಕ್ರಿಸ್ಟಿಯನ್ ಕ್ಲಾರ್ಕ್, ಮ್ಯಾಟ್ ಫಿಷರ್, ಲಾಕಿ ಫಗ್ಯುರ್ಸನ್, ಮಿಚೆ ಹೇ (ವಿ.ಕೀ), ನಿಕ್ ಕೆಲ್ಲಿ, ಟಿಮ್ ಸೀಫರ್ಟ್ (ವಿ.ಕೀ) ಬದಲಿಗರಾಗಿದ್ದಾರೆ.
ಮೊದಲ 3 ಏಕದಿನಕ್ಕೆ ಕಿವೀಸ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲಾಥಮ್ (ವಿ.ಕೀ), ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಬ್ಲೇರ್ ಟಿಕ್ನರ್, ವಿಲ್ ಯಂಗ್; ಕೊನೇ 2 ಏಕದಿನಕ್ಕೆ ಫಿನ್ ಅಲೆನ್, ಕ್ರಿಸ್ಟಿಯನ್ ಕ್ಲಾರ್ಕ್, ಮ್ಯಾಟ್ ಫಿಷರ್, ಲಾಕಿ ಫಗ್ಯುರ್ಸನ್, ಮಿಚೆ ಹೇ (ವಿ.ಕೀ), ನಿಕ್ ಕೆಲ್ಲಿ, ಟಿಮ್ ಸೀಫರ್ಟ್ (ವಿ.ಕೀ) ಸೇರ್ಪಡೆ; ಕಾನ್ವೇ, ಹೆನ್ರಿ, ಜೇಮಿಸನ್, ಲಾಥಮ್, ಡೆರಿಲ್ ಮಿಚೆಲ್, ಫಿಲಿಪ್ಸ್, ರಚಿನ್, ನಾಥನ್ ಸ್ಮಿತ್ ಔಟ್.