ಕ್ರೀಡೆ

ವಿಲಿಯಮ್ಸನ್ ದ್ವಿಶತಕದಾಟ, ನ್ಯೂಜಿಲೆಂಡ್ ಹಿಡಿತದಲ್ಲಿ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ನಾಯಕ ಕೇನ್ ವಿಲಿಯಮ್ಸನ್ (238ರನ್, 364 ಎಸೆತ, 28 ಬೌಂಡರಿ) ವೃತ್ತಿ ಜೀವನದಲ್ಲಿ ಸಿಡಿಸಿದ 4ನೇ ದ್ವಿಶತಕದಾಟ ಹಾಗೂ ಹೆನ್ರಿ ನಿಕೋಲ್ಸ್ (157ರನ್, 291 ಎಸೆತ, 18 ಬೌಂಡರಿ, 1ಸಿಕ್ಸರ್) ಶತಕದ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ. ಹ್ಯಾಗ್ಲೆ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 286 ರನ್‌ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್‌ಗೆ 659 ರನ್‌ಗೆ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಿತು. ಇದರಿಂದ ನ್ಯೂಜಿಲೆಂಡ್ ತಂಡ 362 ರನ್ ಮುನ್ನಡೆ ಸಾಧಿಸಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡ 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 8 ರನ್ ಪೇರಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 354 ರನ್ ಗಳಿಸಬೇಕಿದೆ. ಪಾಕಿಸ್ತಾನ ಮೊದಲ ಇನಿಂಗ್ಸ್ 297 ರನ್ ಕಲೆಹಾಕಿತ್ತು.

ಇದಕ್ಕೂ ಮೊದಲು 112 ರನ್‌ಗಳಿಂದ ವಿಲಿಯಮ್ಸನ್ ಹಾಗೂ 89 ರನ್‌ಗಳಿಂದ ದಿನದಾಟ ಆರಂಭಿಸಿದ ನಿಕೋಲ್ಸ್ ಜೋಡಿ 4ನೇ ವಿಕೆಟ್‌ಗೆ 369 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಬಳಿಕ 6ನೇ ವಿಕೆಟ್‌ಗೆ ಮಿಚೆಲ್ ಹಾಗೂ ವಿಲಿಯಮ್ಸನ್ ಜೋಡಿ 6ನೇ ವಿಕೆಟ್‌ಗೆ 133 ಕಲೆಹಾಕಿತು. ವಿಲಿಯಮ್ಸನ್ ನಿರ್ಗಮನದ ಬೆನ್ನಲ್ಲೆ ಇನಿಂಗ್ಸ್‌ಗೆ ಡಿಕ್ಲೇರ್ ಘೋಷಿಸಲಾಯಿತು. 2 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0 ಯಿಂದ ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ: 297 ಮತ್ತು 1 ವಿಕೆಟ್‌ಗೆ 8 (ಅಬಿದ್ ಅಲಿ 7*, ಕೈಲ್ ಜೇಮಿಸನ್ 1ಕ್ಕೆ 1), ನ್ಯೂಜಿಲೆಂಡ್: 6 ವಿಕೆಟ್‌ಗೆ 659 ಡಿಕ್ಲೇರ್ (ಕೇನ್ ವಿಲಿಯಮ್ಸನ್ 238, ಹೆನ್ರಿ ನಿಕೋಲ್ಸ್ 157, ಡಾರ್ಲಿ ಮಿಚೆಲ್ 102*, ಶಹೀನ್ ಅಫ್ರಿದಿ 101ಕ್ಕೆ 2, ಮೊಹಮದ್ ಅಬ್ಬಾಸ್ 98ಕ್ಕೆ 2, ಹೀಮ್ ಅಶ್ರಫ್ 106ಕ್ಕೆ 2).