ಕ್ರೀಡೆ

ನ್ಯೂಜಿಲೆಂಡ್ ಎ ಗೆ ಜಯ; ಸರಣಿ ಸೋತ ಭಾರತ ಎ

ಕ್ರೖೆಸ್ಟ್​ಚರ್ಚ್: ಭಾರತ ರಾಷ್ಟ್ರೀಯ ತಂಡ ನ್ಯೂಜಿಲೆಂಡ್ ನೆಲದಲ್ಲಿ ಗೆಲುವಿನ ಅಭಿಯಾನದಲ್ಲಿರುವ ನಡುವೆ ಭಾರತ ಎ ತಂಡ ಏಕದಿನ ಸರಣಿಯಲ್ಲಿ 1-2ರಿಂದ ಸೋಲು ಕಂಡಿದೆ. ಭಾನುವಾರ ನಡೆದ ಸರಣಿಯ ನಿರ್ಣಾಯಕ 3ನೇ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ ಆತಿಥೇಯ ನ್ಯೂಜಿಲೆಂಡ್ ಎ ವಿರುದ್ಧ 5 ರನ್​ಗಳಿಂದ ರೋಚಕ ಸೋಲು ಎದುರಿಸಿತು. ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಇಶನ್ ಕಿಶನ್ (71*ರನ್, 84 ಎಸೆತ, 8 ಬೌಂಡರಿ) ಹೋರಾಟದ ನಡುವೆ 9 ಎಸೆತಗಳ ಅಂತರದಲ್ಲಿ ಕೊನೇ 4 ವಿಕೆಟ್ ಕಳೆದುಕೊಂಡು ಭಾರತ ಎ ತಂಡ ಎಡವಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಿವೀಸ್ ಎ ತಂಡ ಒಂದು ಹಂತದಲ್ಲಿ 105 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜತೆಗೂಡಿದ ಮಾರ್ಕ್ ಚಾಪ್​ವುನ್ (110*) ಮತ್ತು ಟಾಡ್ ಆಸ್ಟಲ್ (56) 7ನೇ ವಿಕೆಟ್​ಗೆ 136 ರನ್ ಕೂಡಿಸಿ ಕಿವೀಸ್ ತಂಡ 7 ವಿಕೆಟ್​ಗೆ 270 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಭಾರತ ಎ ತಂಡ ಉತ್ತಮ ಆರಂಭ ಕಂಡರೂ, ಮಧ್ಯಮ ಸರದಿಯ ಕುಸಿತದಿಂದಾಗಿ 49.4 ಓವರ್​ಗಳಲ್ಲಿ 265 ರನ್​ಗೆ ಆಲೌಟ್ ಆಯಿತು.

ಇನ್ನು ಜನವರಿ 30ರಿಂದ ಉಭಯ ತಂಡಗಳ ನಡುವೆ 2 ಪಂದ್ಯಗಳ ಚತುರ್ದಿನ ಟೆಸ್ಟ್ ಸರಣಿ ನಡೆಯಲಿದೆ. ಇದು ಭಾರತ ತಂಡದ ಕೆಲ ಆಟಗಾರರಿಗೆ ಟೆಸ್ಟ್ ಸರಣಿಗೆ ಪೂರ್ವಸಿದ್ಧತೆಯೂ ಆಗಿರಲಿದೆ.

ನ್ಯೂಜಿಲೆಂಡ್ ಎ: 7 ವಿಕೆಟ್​ಗೆ 270 (ವರ್ಕರ್ 6, ಫಿಲಿಪ್ಸ್ 35, ಬ್ಲಂಡೆಲ್ 37, ಚಾಪ್​ವುನ್ 110*, ಟಾಡ್ ಆಸ್ಟಲ್ 56, ಪೊರೆಲ್ 64ಕ್ಕೆ 3, ರಾಹುಲ್ ಚಹರ್ 49ಕ್ಕೆ 2). ಭಾರತ ಎ: 49.4 ಓವರ್​ಗಳಲ್ಲಿ 265 (ಪೃಥ್ವಿ ಷಾ 55, ಋತುರಾಜ್ 44, ಮಯಾಂಕ್ 24, ಕಿಶನ್ 71*, ಅಕ್ಷರ್ 32, ಜೇಮಿಸನ್ 49ಕ್ಕೆ 4, ಅಜಾಜ್ 44ಕ್ಕೆ 3, ರಚಿನ್ ರವೀಂದ್ರ 43ಕ್ಕೆ 2). -ಪಿಟಿಐ/ಏಜೆನ್ಸೀಸ್

ಕೊನೆಯ ಓವರ್​ನಲ್ಲಿ ಎಡವಿದ ಭಾರತ ಎ

ಕೊನೇ ಓವರ್​ನಲ್ಲಿ ಭಾರತದ ಗೆಲುವಿಗೆ 7 ರನ್ ಬೇಕಿತ್ತು ಮತ್ತು 2 ವಿಕೆಟ್ ಕೈಯಲ್ಲಿತ್ತು. ಆದರೆ ವೇಗಿ ಕೈಲ್ ಜೇಮಿಸನ್ (49ಕ್ಕೆ 4) ಓವರ್​ನ ಮೊದಲ ಎಸೆತದಲ್ಲಿ ರನ್ ಗಳಿಸದ ಇಶನ್ ಕಿಶನ್, 2ನೇ ಎಸೆತದಲ್ಲಿ ಸಿಂಗಲ್ಸ್ ಕಸಿದು ಬಾಲಂಗೋಚಿಗಳಿಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಮುಂದಿನೆರಡು ಎಸೆತಗಳಲ್ಲಿ ಸಂದೀಪ್ ವಾರಿಯರ್ ಮತ್ತು ಇಶನ್ ಪೊರೆಲ್ ವಿಕೆಟ್ ಕಬಳಿಸುವ ಮೂಲಕ ಜೇಮಿಸನ್ ಕಿವೀಸ್​ಗೆ ಗೆಲುವು ತಂದರು. ಇದಕ್ಕೆ ಮುನ್ನ ಇನಿಂಗ್ಸ್​ನ 49ನೇ ಓವರ್​ನಲ್ಲಿ ಅಕ್ಷರ್ ಪಟೇಲ್ (32) ಮತ್ತು ರಾಹುಲ್ ಚಹರ್ (0) ಔಟಾಗಿದ್ದರು.