ಮುಂಬೈ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ಐಸಿಸಿ ಹಾಗೂ ಪಿಸಿಬಿ ಸಿದ್ಧತೆ ಮಾಡಿಕೊಂಡಿದ್ದು, ಟೂರ್ನಿ ಆರಂಭವಾಗುವುದಕ್ಕೆ ಇನ್ನೂ 38 ದಿನಗಳು ಬಾಕಿ ಉಳಿದಿದೆ. ಪಾಕಿಸ್ತಾನ ಹಾಗೂ ಯುಎಇ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, ಸದಸ್ಯರ ಹೆಸರನ್ನು ಪ್ರಕಟಿಸಬೇಕಿದೆ. ಇನ್ನೂ ಟೀಮ್ ಇಂಡಿಯಾ ವಿಚಾರಕ್ಕೆ ಬರುವುದಾದರೆ ಬಿಸಿಸಿಐ (BCCI) ಜನವರಿ 12ಕ್ಕೆ ತಂಡವನ್ನು ಪ್ರಕಟಿಸುತ್ತದೆ ಎಂದು ಹೇಳಲಾಗಿತ್ತಾದರು ಇದೀಗ ಇದು ಮುಂದಕ್ಕೆ ಹೋಗಬಹುದು ಎಂದು ಹೇಳಲಾಗಿದೆ.
ಕ್ರಿಕ್ಬಜ್ ವರದಿ ಮಾಡಿರುವ ಪ್ರಕಾರ, ತಂಡ ಆಯ್ಕೆ ಸಂಬಂಧ ಬಿಸಿಸಿಐ (BCCI) ಐಸಿಸಿಗೆ ಸಮಯ ಕೇಳಿದ್ದು, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಶೀಘ್ರದಲ್ಲೇ ಪ್ರಕಟಿಸುವುದು ಪಕ್ಕಾ ಎಂದು ಹೇಳಲಾಗಿದೆ. ತಾತ್ಕಾಲಿಕ ತಂಡವನ್ನು ಘೋಷಿಸಿದ ಒಂದು ತಿಂಗಳ ನಂತರ ತಂಡಗಳಿಗೆ ಬದಲಾವಣೆಗಳನ್ನು ಮಾಡಲು ಐಸಿಸಿ ಅವಕಾಶ ನೀಡಿದ್ದರೂ ಬಿಸಿಸಿಐ ಹೆಚ್ಚಿನ ಸಮಯವನ್ನು ಕೇಳಿರುವುದಾಗಿ ವರದಿಯಾಗಿದೆ. ಈ ಕಾರಣಕ್ಕೆ ತಂಡದ ಆಯ್ಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಇನ್ನೂ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಸೋಲಿಗೆ ಸಂಬಂಧಿಸಿದಂತೆ ಬಿಸಿಸಿಐ (BCCI) ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಚಾಂಪಿಯನ್ಸ್ ಟ್ರೋಫಿ ವಿವಾರವಾಗಿಯೂ ಮಾತುಕತೆ ನಡೆಸಲಾಗುವುದು ಎಂದು ವರದಿಯಾಗಿದೆ. ಈ ಸಂಬಂಧ ಇಬ್ಬರ ಜತೆ ಪ್ರತ್ಯೇಕವಾಗಿ ಬಿಸಿಸಿಐ ಸಭೆ ನಡೆಸಿದ್ದು, ಅಂತಿಮವಾಗಿ ಯಾರ ಆಯ್ಕೆಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.
ಇನ್ನೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಕಮ್ಬ್ಯಾಕ್ ಮಾಡುವ ವಿಚಾರವಾಗುಯೂ ಕೂಡ ಸಭೆಯಲ್ಲಿ ಚರ್ಚಿಸಲಾಗುತ್ತಿದ್ದು, ಶಮಿ ಫಿಟ್ನೆಸ್ ಆಧರಿಸಿ ಮಣೆ ಹಾಕಲು ಆಯ್ಕೆ ಸಮಿತಿ ನಿರ್ಧರಿಸಿದೆ. ಈಗಾಗಲೇ ಶಮಿ ಪುನಶ್ಚೇತನ ಕೇಂದ್ರದಲ್ಲಿದ್ದು, ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಶಮಿ ಫಿಟ್ ಆದಲ್ಲಿ ತಂಡಕ್ಕೆ ವಾಪಸ್ ಆಗುವುದಂತು ಖಚಿತವಾಗಿದೆ.