ಕ್ರೀಡೆ

ಐಪಿಎಲ್‌ನಲ್ಲಿ ಶ್ರೇಯಸ್, ಪ್ಲೆಸಿಸ್, ಧವನ್‌ಗೆ ನಾಯಕತ್ವ ನಿರೀಕ್ಷೆ

ಬೆಂಗಳೂರು: ಐಪಿಎಲ್ ಆಟಗಾರರ ಮೆಗಾ ಹರಾಜು ಪೂರ್ಣಗೊಂಡ ಬಳಿಕ ಇದೀಗ ನಾಯಕನಿಲ್ಲದೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮೂರು ತಂಡಗಳು ಶೀಘ್ರವೇ ಹೊಸ ನಾಯಕನನ್ನು ನೇಮಿಸಲು ಸಜ್ಜಾಗಿವೆ.

ಹರಾಜಿಗೆ ಒಳಪಟ್ಟ ಆಟಗಾರರ ಪೈಕಿ ನಾಯಕತ್ವವನ್ನೂ ವಹಿಸಬಲ್ಲ ನೆಚ್ಚಿನ ಅಭ್ಯರ್ಥಿ ಎನಿಸಿದ್ದ ಶ್ರೇಯಸ್ ಅಯ್ಯರ್ ಬರೋಬ್ಬರಿ 12.25 ಕೋಟಿ ರೂ. ಮೊತ್ತಕ್ಕೆ ಕೋಲ್ಕತ ನೈಟ್‌ರೈಡರ್ಸ್‌ ಪಾಲಾಗಿದ್ದು, ನಾಯಕತ್ವವನ್ನೂ ವಹಿಸಿಕೊಳ್ಳುವುದು ಬಹುತೇಕ ಪಕ್ಕ ಎನಿಸಿದೆ.

ಇನ್ನು ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಹೊಸ ನಾಯಕನ ಹುಡುಕಾಟದಲ್ಲಿದ್ದ ಆರ್‌ಸಿಬಿ ತಂಡ, ಹೊಸ ಸೇರ್ಪಡೆಯಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್‌ಗೆ ಸಾರಥ್ಯ ವಹಿಸುವ ಸಾಧ್ಯತೆಗಳಿವೆ. ಹರಾಜು ಪ್ರಕ್ರಿಯೆಯ ಬಳಿಕ ಆರ್‌ಸಿಬಿ ಅಧಿಕಾರಿಗಳ ಹೇಳಿಕೆಗಳೂ ಇದೇ ಸೂಚನೆ ರವಾನಿಸಿವೆ. ಆದರೆ ದಿನೇಶ್​ ಕಾರ್ತಿಕ್ ಕೂಡ ರೇಸ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಗ್ಲೆನ್​ ಮ್ಯಾಕ್ಸ್​ವೆಲ್​ರನ್ನು ನಾಯಕರನ್ನಾಗಿ ಆರಿಸುವುದಾದರೆ, ಆರ್​ಸಿಬಿ ಹರಾಜಿಗೆ ಮುನ್ನವೇ ಹೆಸರು ಪ್ರಕಟಿಸುತ್ತಿತ್ತು ಎಂದೂ ಹೇಳಲಾಗಿದೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ ಹೊಸ ನಾಯಕರಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕಾಗಿ ಪಂಜಾಬ್ ತಂಡ 8.25 ಕೋಟಿ ರೂ.ವರೆಗೆ ಬಿಡ್ ಸಲ್ಲಿಸಿ ಧವನ್‌ರನ್ನು ಸೆಳೆದುಕೊಂಡಿತ್ತು ಎನ್ನಲಾಗಿದೆ.