ಬೆಂಗಳೂರು: ಬಸವನಗುಡಿ ಈಜು ಕೇಂದ್ರ, ಆತಿಥೇಯ ನೆಟ್ಟಕಲ್ಲಪ್ಪ ಈಜು ಕೇಂದ್ರ, ಬೆಂಗಳೂರು ಈಜು ಅಕಾಡೆಮಿ ಮತ್ತು ಡಾಲ್ಫಿನ್ ಅಕ್ವಾಟಿಕ್ಸ್ನ ಈಜುಪಟುಗಳು ನೆಟ್ಟಕಲ್ಲಪ್ಪ ಈಜು ಚಾಂಪಿಯನ್ಷಿಪ್ನ ಮೊದಲ ದಿನ ಪ್ರಾಬಲ್ಯ ಮೆರೆದರು. ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಕೂಟದಲ್ಲಿ ಶನಿವಾರ ಬಸವನಗುಡಿ ಈಜು ಕೇಂದ್ರದ ಆಕಾಶ್ ಮಣಿ 100 ಮೀ. ಬ್ಯಾಕ್ಸ್ಟ್ರೊಕ್ ಮತ್ತು 50 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಅವರು ಎರಡೂ ವಿಭಾಗಗಳಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ ಅವರನ್ನು ಹಿಂದಿಕ್ಕಿದರು. ಬಸವನಗುಡಿ ಈಜು ಕೇಂದ್ರ ವಿಹಿತಾ ನಯನಾ ಲೋಗನಾಥನ್ 50 ಮೀ. ಬ್ಯಾಕ್ಸ್ಟ್ರೊಕ್ ಮತ್ತು 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಚಿನ್ನ ಜಯಿಸಿದರು.
ಡಾಲ್ಫಿನ್ಸ್ ಅಕ್ವಾಟಿಕ್ಸ್ನ ರೋಹಿತ್ ಬೆನೆಡಿಕ್ಟನ್ 50 ಮೀ. ಬಟರ್ಫ್ಲೈ ಮತ್ತು 100 ಮೀ. ಬಟರ್ಫ್ಲೈ ವಿಭಾಗದಲ್ಲಿ ಸ್ವರ್ಣ ಒಲಿಸಿಕೊಂಡರು. ಸ್ವಿಮ್ಲೈಫ್ನ ನೈಷಾ ಶೆಟ್ಟಿ ಮಹಿಳೆಯರ 100 ಮೀ. ಬಟರ್ಫ್ಲೈ ಮತ್ತು 50 ಮೀ. ಬಟರ್ಫ್ಲೈ ವಿಭಾಗದಲ್ಲಿ ಬಂಗಾರ ಗೆದ್ದರು.
ಬಸವನಗುಡಿ ಈಜು ಕೇಂದ್ರ ಎಸ್. ಕ್ರಿಷ್ ಬಾಲಕರ 100 ಮೀ. ಬಟರ್ಫ್ಲೈ ಮತ್ತು 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಚಿನ್ನ ಜಯಿಸಿದರು. ಬೆಂಗಳೂರು ಈಜು ಅಕಾಡೆಮಿಯ ಔನಾ ಆಳ್ವಾ ಪಿ. ಬಾಲಕಿಯರ 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಸ್ವರ್ಣ ಜಯಿಸಿದರು. ನೆಟ್ಟಕಲ್ಲಪ್ಪ ಈಜು ಕೇಂದ್ರ ಮುಹಮ್ಮದ್ ಜಯ್ದ್ ಬಾಲಕರ 100 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು. ಬಸವನಗುಡಿ ಈಜು ಕೇಂದ್ರದ ಸಮರ್ಥ್ ಗೌಡ ಬಿ.ಎಸ್. ಬಾಲಕರ 100 ಮೀ. ಬ್ಯಾಕ್ಸ್ಟ್ರೊಕ್ ಮತ್ತು 100 ಮೀ. ಬಟರ್ಫ್ಲೈ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದರು.