ನವದೆಹಲಿ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಕೈಗೊಂಡಿದ್ದ ಟೀಮ್ ಇಂಡಿಯಾ, ಜು.30ರಂದು ನಡೆದ ಮೂರನೇ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ರೋಚಕ ಜಯ ಸಾಧಿಸಿತು. ಲಂಕಾ ಪಡೆಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತ, ಟಿ20 ಸರಣಿ ವಶಪಡಿಸಿಕೊಂಡಿತು. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಶುಕ್ರವಾರದಿಂದ (ಆ.02) ಶ್ರೀಲಂಕಾ ವಿರುದ್ಧದ ಏಕದಿನ ಸಿರೀಸ್ ಗೆಲ್ಲಲು ಎದುರುನೋಡುತ್ತಿದೆ. ಒಂದೆಡೆ ಒಡಿಐ ಸರಣಿ ಗೆಲ್ಲಲು ಭಾರತ ತಂಡ ಸಜ್ಜಾದರೆ, ಮತ್ತೊಂದೆಡೆ ಈ ತಂಡದಲ್ಲಿ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಆಡುತ್ತಿರುವುದು ವಿಶೇಷ.
ಏಕದಿನ ಸರಣಿಯ ಮೊದಲ ಪಂದ್ಯದ ಹಿನ್ನಲೆ ತಾವು ನೆಟ್ಸ್ನಲ್ಲಿ ನಡೆಸಿದ ಅಭ್ಯಾಸದ ಫೋಟೋವೊಂದನ್ನು ಕ್ಯಾಪ್ಟನ್ ರೋಹಿತ್ ಶರ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಸಲಿಗೆ ಇದೇ ಫೋಟೋವನ್ನು ಮೊದಲು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು. ಇಲ್ಲಿ ರೋಹಿತ್ರನ್ನು ಗಮನಿಸಿದ ನೆಟ್ಟಿಗರು, ಅವರು ಪೋಸ್ಟ್ ಮಾಡಿದ ಫೋಟೋ ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಶರ್ಮ ಹಾಕಿದ ಛಾಯಚಿತ್ರವೇ ಬೇರೆ ತೋರುತ್ತಿದೆ ಮತ್ತು ಬಿಸಿಸಿಐ ಪೋಸ್ಟ್ ಮಾಡಿರುವ ಫೋಟೋವೇ ಮತ್ತೊಂದು ಹೇಳುತ್ತಿದೆ ಎಂದು ಅಭಿಪ್ರಾಯಿಸಿದ್ದಾರೆ. ಎರಡನ್ನು ಹೋಲಿಸಿ ಟ್ರೋಲ್ ಮಾಡಿದ ನೆಟ್ಟಿಗರು, ರೋಹಿತ್ ತಮ್ಮ ಫೋಟೋನ ಎಡಿಟ್ ಮಾಡಿ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಹೊಟ್ಟೆ ಮರೆಮಾಚುವ ಸಲುವಾಗಿ ರೋಹಿತ್ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ ಎಂದು ನೆಟ್ಟಿಗರು ವ್ಯಾಪಕ ಟ್ರೋಲ್ ಮಾಡುತ್ತಿದ್ದಂತೆ ರೋಹಿತ್ ತಮ್ಮ ಇನ್ಸ್ಟಾಗ್ರಾಮ್ನಿಂದ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಫೋಟೋ ಡಿಲೀಟ್ ಮಾಡುವಷ್ಟು ಎಡಿಟಿಂಗ್ ಮಾಡಿದ್ರಾ ಕ್ಯಾಪ್ಟನ್? ಎಂದು ಪ್ರಶ್ನಿಸುವಂತೆ ಮಾಡಿದೆ. ಒಟ್ಟಾರೆ ಟಿ20 ಸರಣಿ ಗೆದ್ದ ರೀತಿಯಲ್ಲಿ ಏಕದಿನ ಸರಣಿಯನ್ನು ಕೂಡ ಕ್ಲೀನ್ ಸ್ವೀಪ್ ಮುಖಾಂತರವೇ ಗೆಲ್ಲಲಿ ಎಂದು ಕ್ರಿಕೆಟ್ ಪ್ರಿಯರು ಆಶಿಸಿದ್ದಾರೆ,(ಏಜೆನ್ಸೀಸ್).