ಕ್ರೀಡೆ

ಟಿ20 ಕ್ರಿಕೆಟ್​ನಲ್ಲಿ ಮೆಗಾ ಡ್ರಾಮಾ: ಒಂದೇ ಪಂದ್ಯದಲ್ಲಿ 3 ಸೂಪರ್​ ಓವರ್​, ನೇಪಾಳ vs ನೆದರ್ಲೆಂಡ್ಸ್​, ಗೆಲುವು ಯಾರಿಗೆ? Netherlands vs Nepal

Netherlands vs Nepal : ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಸ್ಮರಣೀಯ ಪಂದ್ಯ. ಏಕೆಂದರೆ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಒಂದಲ್ಲ, ಎರಡಲ್ಲ, ಮೂರು ಸೂಪರ್ ಓವರ್‌ಗಳನ್ನು ಆಡಬೇಕಾಯಿತು.

ಕ್ರಿಕೆಟ್ ಪಂದ್ಯದಲ್ಲಿ ಯಾವಾಗ? ಏನಾಗುತ್ತದೆ? ಎಂದು ಯಾರಿಂದಲೂ ಊಹಿಸಲಾಗದು. ಇದು ನಿಮಗೂ ಕೂಡ ಗೊತ್ತು. ಪ್ರತಿ ಚೆಂಡು, ಪ್ರತಿ ರನ್, ಪ್ರತಿ ವಿಕೆಟ್ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಬಹುದು. ಅದರಲ್ಲೂ, ಸೂಪರ್ ಓವರ್ ವಿಷಯಕ್ಕೆ ಬಂದಾಗ, ಕ್ರೀಡಾಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರುತ್ತದೆ. ಆದರೆ, ಒಂದು ಪಂದ್ಯದಲ್ಲಿ ಒಂದಲ್ಲ ಮೂರು ಸೂಪರ್ ಓವರ್‌ಗಳನ್ನು ಆಡಿದರೆ ಹೇಗಿರುತ್ತೆ ಊಹಿಸಿ? ಈ ಕ್ಷಣದವರೆಗೆ ಇದು ಎಲ್ಲಿಯೂ ನಡೆದಿಲ್ಲ. ಆದರೆ, ಇದೀಗ ಅದು ನಡೆದಿದೆ. ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯನ್ನು ಆಶ್ಚರ್ಯಗೊಳಿಸಿದೆ. ನೆದರ್ಲೆಂಡ್ಸ್​​ ಮತ್ತು ನೇಪಾಳ ನಡುವಿನ ಟಿ20 ಪಂದ್ಯದಲ್ಲಿ ಇದು ಸಂಭವಿಸಿದೆ.

ನೇಪಾಳ vs ನೆದರ್ಲೆಂಡ್ಸ್​​ (NED vs NEP T20 ಕ್ರಿಕೆಟ್ ಪಂದ್ಯ) ನಡುವಿನ ಪಂದ್ಯದಲ್ಲಿ, ಒಂದಲ್ಲ ಮೂರು ಸೂಪರ್ ಓವರ್‌ಗಳನ್ನು ಬೌಲ್ ಮಾಡಬೇಕಾಯಿತು. ಕೊನೆಯ ಸೂಪರ್ ಓವರ್‌ನಲ್ಲಿ, ನೆದರ್ಲೆಂಡ್ಸ್​ ಪರ ಮೈಕೆಲ್ ಲೆವಿಟ್ ಐದು ಎಸೆತಗಳು ಬಾಕಿ ಇರುವಾಗಲೇ ಸಿಕ್ಸರ್​ ಬಾರಿಸಿ ವಿಜಯ ಪತಾಕೆ ಆರಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್​ ತಂಡವು 7 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಬಾಸ್ ಡಿ ಲೀಡೆ (35) ಮತ್ತು ವಿಕ್ರಮ್‌ಜಿತ್ ಸಿಂಗ್ (30) ಉತ್ತಮ ಇನ್ನಿಂಗ್ಸ್ ಆಡಿದರು. ನೆದರ್ಲೆಂಡ್ಸ್​​ ಪಂದ್ಯವನ್ನು ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ನೇಪಾಳ ಗೆಲುವಿಗಾಗಿ ಹೋರಾಟ ನಡೆಸಿತು. ಕೊನೆಯ ಓವರ್‌ನಲ್ಲಿ, ನಂದನ್ ಯಾದವ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಸ್ಕೋರ್ ಅನ್ನು ಸಮಬಲಗೊಳಿಸಿದರು. ಇದರಿಂದಾಗಿ, ಪಂದ್ಯವು ಸೂಪರ್ ಓವರ್‌ಗೆ ಹೋಯಿತು. ಈ ಪಂದ್ಯದಲ್ಲಿ ನೇಪಾಳ ಪರ ನಾಯಕ ರೋಹಿತ್ 48 ರನ್ ಗಳಿಸಿದರು.

ಮೊದಲ ಸೂಪರ್ ಓವರ್‌ನಲ್ಲಿ ನೇಪಾಳ ಒಂದು ವಿಕೆಟ್​ಗೆ 19 ರನ್​ ಗಳಿಸಿದರೆ, ನೆದರ್ಲೆಂಡ್ಸ್​​ ಮೊದಲ ಸೂಪರ್ ಓವರ್‌ನಲ್ಲಿ ಮೈಕೆಲ್ (6*), (12*) ಅವರ ನೆರವಿನಿಂದ ಸಮಬಲಗೊಳಿಸಿತು. ಎರಡನೇ ಸೂಪರ್ ಓವರ್‌ನಲ್ಲಿ ನೆದರ್ಲೆಂಡ್ಸ್​​ ಮೊದಲು ಬ್ಯಾಟ್ ಮಾಡಿ ಎರಡು ವಿಕೆಟ್​ ನಷ್ಟಕ್ಕೆ 17 ರನ್ ಗಳಿಸಿತು. ಬಳಿಕ ನೇಪಾಳ ತಂಡ ರೋಹಿತ್ (7* ರನ್) ಮತ್ತು ದೀಪೇಂದ್ರ (10*) ಅವರ ನೆರವಿನಿಂದ 17 ರನ್ ಗಳಿಸಿ ಸಮಬಲಗೊಳಿಸಿತು. ಇದರಿಂದಾಗಿ ಪಂದ್ಯವು ಮೂರನೇ ಸೂಪರ್ ಓವರ್‌ಗೆ ಹೋಯಿತು.

ಮೂರನೇ ಸೂಪರ್ ಓವರ್ ನೇಪಾಳವನ್ನು ನಿರಾಸೆಗೊಳಿಸಿತು. ನಾಯಕ ರೋಹಿತ್ (0), ದೀಪೇಂದ್ರ (0), ಮತ್ತು ರೂಪೇಶ್ (0) ಔಟಾದರು. ನೆದರ್ಲೆಂಡ್ಸ್​ ತಂಡದ ಮೈಕೆಲ್ ಮೊದಲ ಎಸೆತದಲ್ಲೇ ಸಿಕ್ಸರ್​ ಬಾರಿಸಿ ಐದು ಎಸೆತಗಳು ಬಾಕಿ ಇರುವಾಗ 2 ವಿಕೆಟ್‌ಗಳಿಂದ ಐತಿಹಾಸಿಕ ಗೆಲುವು ಸಾಧಿಸಿದರು. ಟ್ರಿಪಲ್ ಸೂಪರ್ ಓವರ್‌ಗಳಲ್ಲಿ ಆಡಿದ ಪಂದ್ಯದಲ್ಲಿ ನೆದರ್ಲೆಂಡ್ಸ್​​ ತಂಡವೂ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿತು. (ಏಜೆನ್ಸೀಸ್​)