ಕ್ರೀಡೆ

ಏಕದಿನದಲ್ಲಿ ​3ನೇ ಗರಿಷ್ಠ ಚೇಸಿಂಗ್​ ದಾಖಲೆ ಬರೆದ ನೆದರ್ಲೆಂಡ್: ಬಾಂಗ್ಲಾ ಏಕದಿನ ತಂಡಕ್ಕೆ ಹೊಸ ನಾಯಕ

ಡುಂಡೀ: ನೆದರ್ಲೆಂಡ್​ ತಂಡ ಸ್ಕಾಟ್ಲೆಂಡ್​ ವಿರುದ್ಧದ ಏಕದಿನ ಪಂದ್ಯದಲ್ಲಿ 370 ರನ್​ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ 3ನೇ ಗರಿಷ್ಠ ಮೊತ್ತದ ಚೇಸಿಂಗ್​ ದಾಖಲೆ ಬರೆದಿದೆ. ಏಕದಿನ ವಿಶ್ವಕಪ್​ ಅರ್ಹತಾ ಲೀಗ್​&2ರ ಪಂದ್ಯದಲ್ಲಿ ಡಚ್ಚರು ಈ ಸಾಧನೆ ಮಾಡಿದ್ದಾರೆ. ಜಾರ್ಜ್​ ಮುನ್ಸೆ (191 ರನ್​, 150 ಎಸೆತ, 14 ಬೌಂಡರಿ, 11 ಸಿಕ್ಸರ್​) ಭರ್ಜರಿ ಬ್ಯಾಟಿಂಗ್​ನಿಂದ ಸ್ಕಾಟ್ಲೆಂಡ್​ ತಂಡ 6 ವಿಕೆಟ್​ಗೆ 369 ರನ್​ ಪೇರಿಸಿದರೆ, ಮ್ಯಾಕ್ಸ್​ ಓ'ಡೌಡ್​ (158*ರನ್​, 130 ಎಸೆತ, 13 ಬೌಂಡರಿ, 4 ಸಿಕ್ಸರ್​) ಪ್ರತಿಹೋರಾಟದ ಬಲದಿಂದ ನೆದರ್ಲೆಂಡ್​ 49.2 ಓವರ್​ಗಳಲ್ಲಿ 6 ವಿಕೆಟ್​ಗೆ 374 ರನ್​ ಸಿಡಿಸಿ ಜಯಿಸಿತು. ಆಸೀಸ್​ ವಿರುದ್ಧ 2006ರಲ್ಲಿ 435 ಮತ್ತು 2016ರಲ್ಲಿ 372 ರನ್​ಗಳ ಗುರಿಯನ್ನು ದಣ ಆಫ್ರಿಕಾ ಬೆನ್ನಟ್ಟಿರುವುದು ಏಕದಿನದಲ್ಲಿ ಮೊದಲೆರಡು ಚೇಸಿಂಗ್​ ದಾಖಲೆಗಳಾಗಿವೆ.

ಜಾರ್ಜ್​ ಮುನ್ಸೆ ಗಳಿಸಿದ 191 ರನ್​ ಏಕದಿನ ಕ್ರಿಕೆಟ್​ನಲ್ಲಿ ಅಸೋಸಿಯೇಟ್​ ತಂಡವೊಂದರ ಬ್ಯಾಟರ್​ ಗಳಿಸಿದ ಗರಿಷ್ಠ ರನ್​ಗಳಾಗಿವೆ. 2010ರಲ್ಲಿ ಐರ್ಲೆಂಡ್​ನ ಪೌಲ್​ ಸ್ಟಿರ್ಲಿಂಗ್​ 177 ರನ್​ ಸಿಡಿಸಿದ್ದು ಹಿಂದಿನ ದಾಖಲೆ.

ಬಾಂಗ್ಲಾ ಏಕದಿನ ತಂಡಕ್ಕೆ ಮಿರಾಜ್​ ಹೊಸ ನಾಯಕ

ಢಾಕಾ: ಬಾಂಗ್ಲಾದೇಶ ಏಕದಿನ ತಂಡದಿಂದ ನಾಯಕತ್ವದಿಂದ ನಜ್ಮುಲ್​ ಹೊಸೈನ್​ ಶಾಂಟೊರನ್ನು ವಜಾಗೊಳಿಸಲಾಗಿದ್ದು, ಆಲ್ರೌಂಡರ್​ ಮೆಹಿದಿ ಹಸನ್​ ಮಿರಾಜ್​ರನ್ನು ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಮತ್ತು ಆಗಸ್ಟ್​ನಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿಗಳು ಅವರ ಮುಂದಿರುವ ಮೊದಲೆರಡು ಸವಾಲುಗಳಾಗಿವೆ. ಶಾಂಟೋ ಟೆಸ್ಟ್​ ತಂಡ ಮತ್ತು ಲಿಟನ್​ ದಾಸ್​ ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. 2017ರಿಂದ ಇದುವರೆಗೆ ಬಾಂಗ್ಲಾ ಪರ 105 ಏಕದಿನ ಪಂದ್ಯ ಆಡಿರುವ 27 ವರ್ಷದ ಮಿರಾಜ್​, 2 ಶತಕಗಳ ಸಹಿತ 1,617 ರನ್​ ಮತ್ತು 110 ವಿಕೆಟ್​ ಗಳಿಸಿದ್ದಾರೆ.