ಕ್ರೀಡೆ

ಆರ್‌ಸಿಬಿ ಸೋಲಿಗೆ ವಿರಾಟ್ ಕೊಹ್ಲಿ ನೀಡಿದ ಕಾರಣವೇನು ಗೊತ್ತೇ?

ಅಬುಧಾಬಿ: ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕ್ಯಾಚ್ ಕೈಚೆಲ್ಲಿದ್ದು ದುಬಾರಿಯಾಯಿತು. ಆ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

132 ರನ್‌ಗಳ ಸಾಧಾರಣ ಸವಾಲು ಬೆನ್ನಟ್ಟಿದ ಸನ್‌ರೈಸರ್ಸ್‌ ತಂಡ 67 ರನ್‌ಗೆ 4 ವಿಕೆಟ್ ಕಳೆದುಕೊಂಡು ಹಿನ್ನಡೆ ಎದುರಿಸಿತ್ತು. ಈ ವೇಳೆ ಜತೆಗೂಡಿದ ಕೇನ್ ವಿಲಿಯಮ್ಸನ್ (50*) ಮತ್ತು ಜೇಸನ್ ಹೋಲ್ಡರ್ (24*) ಅರ್ಧಶತಕದ ಜತೆಯಾಟವಾಡಿ ಇನ್ನೂ 2 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ತಂಡವನ್ನು ಗೆಲ್ಲಿಸಿದರು. ಆದರೆ ಸನ್‌ರೈಸರ್ಸ್‌ಗೆ ಕೊನೇ 2.4 ಓವರ್‌ಗಳಲ್ಲಿ 28 ರನ್ ಅಗತ್ಯವಿದ್ದಾಗ, ವಿಲಿಯಮ್ಸನ್ ಹೊಡೆದ ಚೆಂಡನ್ನು ದೇವದತ್ ಪಡಿಕಲ್ ಬೌಂಡರಿ ಗೆರೆ ಬಳಿ ಕೈಚೆಲ್ಲಿದರು. ಕಠಿಣವಾಗಿದ್ದ ಈ ಕ್ಯಾಚ್ ಹಿಡಿಯಲು ಪಡಿಕಲ್ ಯತ್ನಿಸಿದರೂ, ಬೌಂಡರಿ ಗೆರೆ ಬಳಿ ಬ್ಯಾಲೆನ್ಸ್ ಸಾಧಿಸಲು ಸಾಧ್ಯವಾಗದೆ ಕ್ಯಾಚ್ ಕೈಬಿಟ್ಟರೂ, ಸಿಕ್ಸರ್ ತಪ್ಪಿಸಿ 1 ರನ್ ಮಾತ್ರ ಬಿಟ್ಟುಕೊಡುವ ಮೂಲಕ 5 ರನ್ ರಕ್ಷಿಸಿದ್ದರು. ಕೊನೇ ಓವರ್‌ನಲ್ಲಿ ಸನ್‌ರೈಸರ್ಸ್‌ಗೆ 9 ರನ್ ಅಗತ್ಯವಿದ್ದಾಗ, ನವದೀಪ್ ಸೈನಿ ಎಸೆತದಲ್ಲಿ ಸತತ 2 ಬೌಂಡರಿ ಬಾರಿಸಿದ ಹೋಲ್ಡರ್, ಆರ್‌ಸಿಬಿ ತಂಡವನ್ನು ಟೂರ್ನಿಯಿಂದ ಹೊರದಬ್ಬಿದರು.

ಆರ್‌ಸಿಬಿ ತಂಡ ಗೆಲುವಿಗೆ ಬೇಕಾದಷ್ಟು ರನ್‌ಗಳನ್ನೂ ಕೂಡಿಹಾಕಲಿಲ್ಲ ಎಂದು ಬೇಸರಿಸಿದ ಕೊಹ್ಲಿ, ಬೌಲರ್‌ಗಳ ಪ್ರಯತ್ನದಿಂದಾಗಿ ತಂಡ ಗೆಲುವಿನ ಸನಿಹ ಬರುವಂತಾಯಿತು ಎಂದರು. ಸೋಲಿನ ನಡುವೆಯೂ, ಟೂರ್ನಿಯಲ್ಲಿ 400ಕ್ಕೂ ಅಧಿಕ ರನ್ ಬಾರಿಸಿದ ಕನ್ನಡಿಗ ದೇವದತ್ ಪಡಿಕಲ್ ಆಟವನ್ನು ಶ್ಲಾಘಿಸಿದ ಕೊಹ್ಲಿ, ಯುವ ಬ್ಯಾಟ್ಸ್‌ಮನ್ ತಂಡಕ್ಕೆ ಸಾಕಷ್ಟು ಉಪಯುಕ್ತ ಆಟವಾಡಿದರು ಎಂದರು. ಆರ್‌ಸಿಬಿ ಐಪಿಎಲ್‌ನಲ್ಲಿ 100 ಸೋಲು ಕಂಡ 3ನೇ ತಂಡವೆನಿಸಿತು. ಡೆಲ್ಲಿ ಕ್ಯಾಪಿಟಲ್ಸ್ (104) ಮತ್ತು ಕಿಂಗ್ಸ್ ಇಲೆವೆನ್ (101) ಮೊದಲೆರಡು ತಂಡಗಳು.