ಸೇಂಟ್ ವಿನ್ಸೆಂಟ್: ಅಂತಿಮ 2 ಎಸೆತಗಳಲ್ಲಿ 2 ರನ್ ಗಳಿಸಲು ವೈಲ್ಯ ಕಂಡ ಕ್ರಿಕೆಟ್ ಶಿಶು ನೇಪಾಳ ತಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಅಚ್ಚರಿಯ ಗೆಲುವು ದಾಖಲಿಸುವ ಅವಕಾಶದಿಂದ ವಂಚಿತವಾಯಿತು. ರಿಸ್ಟ್ ಸ್ಪಿನ್ನರ್ ತಬರೇಜ್ ಶಮ್ಸಿ (19ಕ್ಕೆ 4) ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ತನ್ನ 4ನೇ ಲೀಗ್ ಪಂದ್ಯದಲ್ಲಿ ನೇಪಾಳ ಎದುರು 1 ರನ್‌ನಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಹರಿಣಗಳ ಪಡೆ ಅಜೇಯವಾಗಿ ಮುಂದಿನ ಸುತ್ತಿಗೇರಿದರೆ, ನೇಪಾಳ ಸೂಪರ್- 8 ರೇಸ್‌ನಿಂದ ಹೊರಬಿದ್ದಿತು.
ಅರ್ನೋಸ್ ವೇಲ್ ಗ್ರೌಂಡ್‌ನಲ್ಲಿ ಶನಿವಾರ ನಡೆದ ಡಿ ಗುಂಪಿನ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ, ಕುಶಾಲ್ ಭ್ರುಟೆಲ್ (19ಕ್ಕೆ 4) ದಾಳಿಗೆ ನಲುಗಿ 7 ವಿಕೆಟ್‌ಗೆ 115 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಆಸ್ೀ ಶೇಕ್ (42) ಹೋರಾಟದಿಂದ ಉತ್ತಮ ಆರಂಭ ಪಡೆದ ನೇಪಾಳ, ನಂತರ ಶಮ್ಸಿ ದಾಳಿಗೆ ನಿರಂತರ ವಿಕೆಟ್ ಕೈಚೆಲ್ಲಿ 7 ವಿಕೆಟ್‌ಗೆ 114 ರನ್‌ಗಳಿಸಲಷ್ಟೇ ಶಕ್ತವಾಯಿತು.
ದಕ್ಷಿಣ ಆಫ್ರಿಕಾ: 7 ವಿಕೆಟ್‌ಗೆ 115 (ಹೆಂಡ್ರಿಕ್ಸ್ 43, ಡಿಕಾಕ್ 10, ಮಾರ್ಕ್ರಮ್ 15, ಮಿಲ್ಲರ್ 7, ಸ್ಟಬ್ಸ್ 27*, ಕುಶಾಲ್ 19ಕ್ಕೆ 4, ದೀಪೇಂದ್ರ 21ಕ್ಕೆ 3). ನೇಪಾಳ: 7 ವಿಕೆಟ್‌ಗೆ 114 (ಕುಶಾಲ್ 13, ಆಸ್ೀ 42, ಅನಿಲ್ 27, ಗುಲ್ಶಾನ್ 6, ಸೋಂಪಾಲ್ 8*, ಶಮ್ಸಿ 19ಕ್ಕೆ 4, ಮಾರ್ಕ್ರಮ್ 8ಕ್ಕೆ1). ಪಂದ್ಯಶ್ರೇಷ್ಠ: ತಬರೇಜ್ ಶಮ್ಸಿ.
ಸ್ಲಾಗ್ ಓವರ್‌ನಲ್ಲಿ ಲಯ ತಪ್ಪಿದ ನೇಪಾಳ
98 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ನೇಪಾಳಕ್ಕೆ ಅಂತಿಮ 3 ಓವರ್‌ಗಳಲ್ಲಿ 18 ರನ್ ಬೇಕಿತ್ತು. ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್ ಪಡೆದ ಶಮ್ಸಿ ಪಂದ್ಯಕ್ಕೆ ತಿರುವು ನೀಡಿದರು. 19ನೇ ಓವರ್‌ನಲ್ಲಿ 9 ರನ್ ಕಸಿದ ನೇಪಾಳಕ್ಕೆ ಕೊನೇ ಓವರ್‌ನಲ್ಲಿ 8 ರನ್ ಅವಶ್ಯವಿತ್ತು. ಆಗ ಒಟ್ನಿಯಲ್ ಬಾರ್ಟಮನ್ ಎಸೆದ ಓವರ್‌ನ ಮೊದಲೆರಡು ಎಸೆತದಲ್ಲಿ ಗುಲ್ಶಾನ್ ಜಾ ರನ್‌ಗಳಿಸಲು ವಿಲರಾದರು. 3ನೇ ಎಸೆತದಲ್ಲಿ ಬೌಂಡರಿ, ಮರು ಎಸೆತದಲ್ಲಿ 2 ರನ್ ಕಸಿದರು. ಕೊನೇ ಎಸೆತದಲ್ಲಿ 2 ರನ್ ಬೇಕಿದ್ದಾಗ 5ನೇ ಎಸೆತಕ್ಕೆ ರನ್ ಬರಲಿಲ್ಲ. ಗುಲ್ಶಾನ್ ಕೊನೇ ಎಸೆತದಲ್ಲಿ ಚೆಂಡಿಗೆ ಬ್ಯಾಟ್ ತಾಕಿಸದಿದ್ದರೂ ಒಂದು ರನ್‌ಗಾಗಿ ಓಡಿದರು. ಆಗ ವಿಕೆಟ್ ಕೀಪರ್ ಡಿಕಾಕ್ ಸ್ಟ್ರೈಕ್‌ನತ್ತ ಎಸೆದ ಚೆಂಡು ವಿಕೆಟ್‌ಗೆ ತಾಗದೆ ನಾನ್-ಸ್ಟ್ರೈಕ್‌ನತ್ತ ಸಾಗಿತು. ಅಲ್ಲಿಯೇ ಇದ್ದ ಹೆನ್ರಿಕ್ ಕ್ಲಾಸೆನ್ ಚೆಂಡನ್ನು ತ್ವರಿತವಾಗಿ ಪಡೆದು ಕೇವಲ ಕೊದಲೆಳೆ ಅಂತರದಿಂದ ಗುಲ್ಶಾನ್ ಅವರನ್ನು ರನೌಟ್ ಮಾಡಿದರು. ಇದರಿಂದ ಪಂದ್ಯ ಟೈ ಆಗುವುದು ತಪ್ಪಿತು.